ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಕೂಡಲೇ ಉದ್ಘಾಟನೆ ಮಾಡುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಹಾಗೂ ರೈತಸಂಘ ಪದಾಧಿಕಾರಿಗಳು ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿದ ನಮ್ಮ ಕರ್ನಾಟಕ ಸೇನೆ ಹಾಗೂ ರೈತಸಂಘದ ಪದಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ಕುರಿತು ತಹಶೀಲ್ದಾರರ ಗಮನ ಸೆಳೆದರು.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಯುವ ಸಂಚಾಲಕ ಸಿದ್ಧನಗೌಡ ಪಾಟೀಲ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಪೂರ್ಣಗೊಂಡು ೬ ತಿಂಗಳಾದರೂ ಶಾಸಕರಾಗಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಗೆ ಕ್ರಮ ವಹಿಸುತ್ತಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ ಅದಾಗ್ಯೂ ಯಾವುದೇ ನಿರ್ಧಾರವಾಗಿಲ್ಲ. ಹೀಗೆ ಉದ್ಘಾಟನೆಗೆ ವಿಳಂಬ ಮಾಡಿದ್ದಲ್ಲಿ ಇದೇ ದಿ:೩೦ ರಿಂದ ತಹಶೀಲ್ದಾರ ಕಾರ್ಯಾಲಯದ ಮುಂದೆ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಹಸನ್ ನಧಾಫ್, ಅವೋಗೇಶ್ವರಶ್ರೀ, ಹಮೀದ್ ಮುಲ್ಲಾ, ಶಂಕರಗೌಡ ಹಿರೇಗೌಡರ, ಚಿದಾನಂದ ಬಜಂತ್ರಿ, ದಾವಲ್‌ಸಾಬ್ ಹೆಬ್ಬಾಳ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಜಂತ್ರಿ, ದಾದಾ ಬೇಪಾರಿ, ಅಬೂಬಕರ್ ಯಲಗಾರ, ಮಲ್ಲು ಬಿರಾದಾರ ಇದ್ದರು.

