ಲೇಖನ
– ಶಿಲ್ಪಾ ಮೃತ್ಯುಂಜಯ. ಮಿಣಜಿಗಿ
ಸಹ ಶಿಕ್ಷಕಿ
ಕೆ.ಇ.ಬೋರ್ಡ್ ಸೆಂಟ್ರಲ್ ಸ್ಕೂಲ್
ಧಾರವಾಡ
ಉದಯರಶ್ಮಿ ದಿನಪತ್ರಿಕೆ
ಬಸವಾದಿ ಪ್ರಮಥರ ತಪೋಭೂಮಿ, ಮುದ್ರಣ ಕಾಶಿ ಎಂದೇ ಹೆಸರುವಾಸಿಯಾದಂತಹ
ಗದಗದ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳ ಜಾತ್ರೆಯು ಉತ್ತರ ಕರ್ನಾಟಕದ ಅತ್ಯಂತ ದೊಡ್ಡ ಮತ್ತು ಪ್ರಸಿದ್ಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದೆ. ಎಪ್ರಿಲ್ ೦೨ ರಂದು ಗದಗದಲ್ಲಿ ನಡೆಯಲಿರುವ ಈ ಜಾತ್ರೆಯು ಅತ್ಯಂತ ಸಡಗರ-ಸಂಭ್ರಮದಿಂದ ಜರುಗುತ್ತದೆ.
ಈ ಜಾತ್ರೆಯ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ.
ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ
ಈ ಜಾತ್ರೆಯು ೧೫ನೇ ಶತಮಾನದ ಶ್ರೇಷ್ಠ ಶಿವಶರಣರಾದ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಸ್ಮರಣಾರ್ಥವಾಗಿ ನಡೆಯುತ್ತದೆ.
ಗದುಗಿನ ಶ್ರೀ ತೋಂಟದಾರ್ಯ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಕೇಂದ್ರವಾಗಿಯೂ ಹೆಸರುವಾಸಿಯಾಗಿದೆ.
ಜಾತ್ರೆಯ ಪ್ರಮುಖ ಆಕರ್ಷಣೆಗಳು
ರಥೋತ್ಸವ: ಜಾತ್ರೆಯ ಮುಖ್ಯ ಆಕರ್ಷಣೆಯೇ ಭವ್ಯವಾದ ರಥೋತ್ಸವ. ಸಾವಿರಾರು ಭಕ್ತರು ಸೇರಿ ಸಿದ್ಧಲಿಂಗೇಶ್ವರನಿಗೆ ಹರ ಹರ ಮಹದೇವ ಎಂಬ ಘೋಷಣೆಗಳೊಂದಿಗೆ ರಥವನ್ನು ಎಳೆಯುತ್ತಾರೆ.
ಕೃಷಿ ಮೇಳ ಮತ್ತು ಪ್ರದರ್ಶನ
ಇಲ್ಲಿ ರೈತರಿಗಾಗಿ ವಿಶೇಷ ಕೃಷಿ ಮೇಳಗಳು ಮತ್ತು ಜಾನುವಾರು ಪ್ರದರ್ಶನಗಳು ನಡೆಯುತ್ತವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಪ್ರತಿದಿನ ಸಂಜೆ ಮಠದ ಆವರಣದಲ್ಲಿ ನಾಟಕಗಳು, ಜಾನಪದ ಸಂಗೀತ, ಭಜನೆ ಮತ್ತು ಪ್ರವಚನಗಳು ನಡೆಯುತ್ತವೆ. ಇಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಲಾ ಮೇಳಗಳು ಪ್ರದರ್ಶನ ನೀಡುತ್ತವೆ ಮತ್ತು ವಚನ ಕಂಠ ಪಾಠ ಸ್ಪರ್ಧೆ ಈ ಮಠದ ವಿಶೇಷತೆ..
ಭಾವೈಕ್ಯತೆಯ ಜಾತ್ರೆ
ಈ ಜಾತ್ರೆಯಲ್ಲಿ ಜಾತಿ-ಮತದ ಭೇದವಿಲ್ಲದೆ ಎಲ್ಲಾ ಧರ್ಮದ ಜನರು ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ಮಠದ ದ್ವಾರಬಾಗಿಲು ಸದಾ ಸರ್ವಧರ್ಮಿಯರನ್ನು ಸ್ವಾಗತಿಸುತ್ತದೆ
ಪುಸ್ತಕ ಪ್ರದರ್ಶನ
ತೋಂಟದಾರ್ಯ ಮಠವು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ, ಜಾತ್ರೆಯ ಸಮಯದಲ್ಲಿ ದೊಡ್ಡ ಮಟ್ಟದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಮತ್ತು ಶರಣರ ಜೀವನ ಚರಿತ್ರೆಯ ಪುಸ್ತಕಗಳು ಲಭ್ಯವಿರುತ್ತವೆ
ಭಕ್ತರಿಗೆ ಸೌಲಭ್ಯಗಳು
ಜಾತ್ರೆಯ ಅವಧಿಯಲ್ಲಿ ಮಠದ ವತಿಯಿಂದ ಭಕ್ತಾದಿಗಳಿಗೆ ನಿರಂತರವಾಗಿ ದಾಸೋಹ (ಅನ್ನಪ್ರಸಾದ) ವ್ಯವಸ್ಥೆ ಇರುತ್ತದೆ.
ನೀವು ಈ ಬಾರಿ ಜಾತ್ರೆಗೆ ಭೇಟಿ ನೀಡುವ ಯೋಜನೆ ಹೊಂದಿದ್ದರೆ, ರಥೋತ್ಸವದ ನಿಖರವಾದ ದಿನ ದವನದ ಹುಣ್ಣಿಮೆಯ ಸಾಯಂಕಾಲ ಆಗಮಿಸಬೇಕು. ಅಂದು ಸಂಜೆ ತೇರನ್ನು ಎಳೆಯುತ್ತಾರೆ
ಶರಣ ಸಾಹಿತ್ಯದ ಸಂಭ್ರಮ
ಮಠದ ವತಿಯಿಂದ ಪ್ರಕಟವಾಗುವ ನೂರಾರು ಪುಸ್ತಕಗಳು ಜಾತ್ರೆಯ ಸಮಯದಲ್ಲಿ ವಿಶೇಷ ರಿಯಾಯಿತಿಯಲ್ಲಿ ಸಿಗುತ್ತವೆ. “ಮನೆಯಲ್ಲೊಂದು ಗ್ರಂಥಾಲಯ” ಎಂಬ ಘೋಷಣೆಯಡಿ ಜನರಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಲು ಈ ಜಾತ್ರೆ ಒಂದು ದೊಡ್ಡ ವೇದಿಕೆಯಾಗಿದೆ.
ಸಾಂಸ್ಕೃತಿಕ ಕಲೆಗಳ ಸಂಗಮ
ಜಾತ್ರೆಯಲ್ಲಿ ಕೇವಲ ಪೂಜೆ-ಪುನಸ್ಕಾರಗಳಷ್ಟೇ ಇರುವುದಿಲ್ಲ. ಬದಲಾಗಿ ದೊಡ್ಡಾಟ ಮತ್ತು ಸಣ್ಣಾಟಗಳು ರಾತ್ರಿಯಿಡೀ ನಡೆಯುವ ಈ ನಾಟಕಗಳು ಜನಪದ ಕಲೆಯನ್ನು ಜೀವಂತವಾಗಿರಿಸಿವೆ.
ಲಾವಣಿ ಮತ್ತು ತತ್ವಪದಗಳು: ಭಕ್ತರು ಗುಂಪು ಗುಂಪಾಗಿ ಕುಳಿತು ತತ್ವಪದಗಳನ್ನು ಹಾಡುವುದು ಇಲ್ಲಿನ ಸಾಂಪ್ರದಾಯಿಕ ವೈಭವ.
ಮರುದಿನ ಪಲ್ಲಕ್ಕಿ ಉತ್ಸವದಂದು ಶ್ರೀಗಳು ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಭಕ್ತ ಜನರನ್ನು ಆಶೀರ್ವದಿಸುತ್ತಾರೆ.. ಅಷ್ಟೇ ಅಲ್ಲದೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ವ್ಯಕ್ತಿಗಳನ್ನು ಗುರುತಿಸಿ ಶ್ರೀಮಠದಿಂದ ಸನ್ಮಾನ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.

ಶಿವಯೋಗ ಮತ್ತು ಸಮಾಜ ಸೇವೆಯ ಸಂಕೇತ
ಗದುಗಿನ ಶ್ರೀ ತೋಂಟದಾರ್ಯ ಸಿದ್ಧಲಿಂಗೇಶ್ವರರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು “ಶಿವಯೋಗ ಮತ್ತು ಸಮಾಜ ಸೇವೆಯ” ಸಂಕೇತ. ಅವರ ಜಾತ್ರೆಯು ಶ್ರಮಜೀವಿಗಳಿಗೆ ವಿಶ್ರಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುವ ಸುಂದರ ಸುದಿನ ಎಂದು ಹೇಳಬಹುದು
ಶುಚಿ ಮತ್ತು ರುಚಿಯಾದ ಪ್ರಸಾದ ಸೇವೆ
ನೀವು ಜಾತ್ರೆಯ ಸಮಯದಲ್ಲಿ ಅಲ್ಲಿನ ಪ್ರಸಾದ (ದಾಸೋಹ) ವನ್ನು ತಪ್ಪದೇ ಸವಿಯಬೇಕು. ಅಲ್ಲಿನ ಬದನೆಕಾಯಿ ಪಲ್ಯ ಮತ್ತು ರೊಟ್ಟಿಯ ರುಚಿ ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಗೋಧಿ ಹುಗ್ಗಿ, ಬಿಸಿಬೇಳೆಭಾತ್ ಸೇರಿದಂತೆ ಇನ್ನೂ ಅನೇಕ ತರಹದ ರುಚಿ ಮತ್ತು ಶುಚಿಯಾದ ಪ್ರಸಾದ ಸೇವೆಯನ್ನು ಶ್ರೀಮಠ ಜಾತ್ರೆಯ ಸಮಯದಲ್ಲಿ ಮಾಡುತ್ತ ಬಂದಿದೆ.


