ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲಣಾ ಉಪವಿಭಾಗ ಕಚೇರಿಯನ್ನು ಕೊಲ್ಹಾರ ಪಟ್ಟಣದಲ್ಲಿ ಆರಂಭಿಸಲು ಸರ್ಕಾರದಿಂದ ಮಂಜೂರು ಮಾಡಿಸಬೇಕೆಂದು ಶಾಸಕ ಶಿವಾನಂದ ಪಾಟೀಲ ಅವರಲ್ಲಿ ಅವರ ಅಭಿಮಾನಿ ಬಳಗ ಹಾಗೂ ಕೊಲ್ಹಾರ ತಾಲೂಕಿನ ಗಣ್ಯರು ಮನವಿ ಸಲ್ಲಿಸಿದರು.
ನಿಡಗುಂದಿ ತಾಲೂಕಿನಲ್ಲಿರುವ ಕಾರ್ಯ ಮತ್ತು ಪಾಲಣಾ ಉಪವಿಭಾಗ ಕಚೇರಿಯ ವ್ಯಾಪ್ತಿಯಲ್ಲಿ ಕೊಲ್ಹಾರ ತಾಲೂಕು ಬರುವುದರಿಂದ, ತಾಲೂಕಿನ ರೈತರು ಹಾಗೂ ಸಾರ್ವಜನಿಕರು ವಿದ್ಯುತ್ ಸಮಸ್ಯೆಗಳ ಕುರಿತು ದೂರು ಸಲ್ಲಿಸಲು ಮತ್ತು ಹಣಕಾಸು ವ್ಯವಹಾರಗಳನ್ನು ನಡೆಸಲು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಕೊಲ್ಹಾರದಿಂದ ನಿಡಗುಂದಿ ಸುಮಾರು 45 ಕಿ.ಮೀ ದೂರದಲ್ಲಿದ್ದು, ಸಮರ್ಪಕ ಸಾರಿಗೆ ಸೌಲಭ್ಯವೂ ಇಲ್ಲದಿರುವುದು ಜನರಿಗೆ ಹೆಚ್ಚುವರಿ ಕಷ್ಟ ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊಲ್ಹಾರ ಪಟ್ಟಣದಲ್ಲಿಯೇ ಉಪವಿಭಾಗ ಕಚೇರಿ ಪ್ರಾರಂಭಿಸುವಂತೆ ವಿನಂತಿಸಿದರು.
ನೀರಾವರಿ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕೊಲ್ಹಾರ ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ (ಟಿ.ಸಿ) ದುರಸ್ತಿ ಕೇಂದ್ರವನ್ನೂ ಮಂಜೂರು ಮಾಡಿಸುವ ಮೂಲಕ ಸ್ಥಳೀಯ ನಿರುದ್ಯೋಗ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸಲು, ಹಲವು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಂಸ್ಥೆಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಲು ದೇಸಾಯಿ, ತಾನಾಜಿ ನಾಗರಾಳ, ಕೆ.ವಿ. ಕುಲಕರ್ಣಿ, ಪ್ರದೀಪ ಚ. ಪಾಟೀಲ, ಶ್ರೀಕಾಂತ ಗಣಿ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಸಂತೋಷ ಗಣಾಚಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

