ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರ್ಕಾರವು ವಿಶೇಷ ಚೇತನರಿಗಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಹೊಂದಿದರೆ ಜೀವನ ಮಟ್ಟವನ್ನು ಉತ್ತಮ ಗೊಳಿಸಿಕೊಳ್ಳಬಹುದು ಎಂದು ಸಿಂದಗಿ ಹೆಸ್ಕಾಂ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಜಿ.ಎಂ.ಬಿರಾದಾರ ಹೇಳಿದರು.
ಸಿಂದಗಿ ಬಸವ ನಗರದಲ್ಲಿರುವ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ವಿಶೇಷ ಚೇತನರ ಹಕ್ಕುಗಳು ಹಾಗೂ ಸರ್ಕಾರಿ ಸೌಲಭ್ಯಗಳ ಕುರಿತು ಹಮ್ಮಿಕೊಂಡ ತರಬೇತಿ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿಶೇಷ ಚೇತನರು ಸಮಾಜದ ಮುಖ್ಯ ವಾಹಿನಿಯಲ್ಲಿ ಆತ್ಮ ವಿಶ್ವಾಸದಿಂದ ಬದುಕಲು ಶಿಕ್ಷಣ, ಸ್ವಾವಲಂಬನೆ ಹಾಗೂ ಜಾಗೃತಿ ಅತ್ಯಂತ ಅಗತ್ಯವೆಂದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ ಪ್ರಿಯಾಂಕಾ ಅವರು ಮಾತನಾಡಿದರು.
ಈ ವೇಳೆ ಶಂಕರಗೌಡ ಹನುಮಗೊಂಡ, ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ್, ಮಹೇಶ ಚವ್ಹಾಣ ಸೇರಿದಂತೆ ಸಿಂದಗಿ, ಬಬಲೇಶ್ವರ, ಮನ್ನಾಪುರ, ಬಂಟನೂರ ಹಾಗೂ ವಂದಾಲ ಗ್ರಾಮದ ವಿಶೇಷ ಚೇತನರ ಸಂಘದ ಸದಸ್ಯರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಇದ್ದರು.

