ಲೇಖನ
– ಡಾ. ಶಶಿಕಾಂತ ಪಟ್ಟಣ
ರಾಮದುರ್ಗ – ಪುಣೆ
ಉದಯರಶ್ಮಿ ದಿನಪತ್ರಿಕೆ
ಸರ್ವಜ್ಞ ಕವಿ 16ನೇ ಶತಮಾನದಲ್ಲಿ ಜೀವಿಸಿದ್ದ ಕನ್ನಡದ ಅತ್ಯಂತ ಜನಪ್ರಿಯ ಕ್ರಾಂತಿಕಾರಿ ತ್ರಿಪದಿ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಸರ್ವಜ್ಞ ಅಪ್ಪಟ ಬಸವ ಭಕ್ತ ಕ್ರಾಂತಿಕಾರಿ ಕವಿ. ತನ್ನ ಮೊನಚಾದ ಟೀಕೆ ಟಿಪ್ಪಣಿಗಳು ವಿಡಂಬನೆಯಿಂದ ಸುತ್ತಲಿನ ಅಂಕು ಡೊಂಕುಗಳನ್ನು ತಿದ್ದಿದ್ದಾನೆ. ಸಮಾಜದ ಆಷಾಢಭೂತಿತನಕ್ಕೆ ನೇರ ಚಾಟಿ ಏಟು ಬೀಸಿದ್ದಾನೆ.
ಮೂರು ಸಾಲುಗಳ ಸರಳ ‘ತ್ರಿಪದಿ’ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಾರ್ವಕಾಲಿಕ ನೀತಿ ಮತ್ತು ಮೌಲ್ಯಗಳನ್ನು ಬೋಧಿಸಿದ ದಾರ್ಶನಿಕರಾಗಿದ್ದಾರೆ.
ಜನನ ಮತ್ತು ಬಾಲ್ಯ
ಹುಟ್ಟೂರು: ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು.
ನಿಜನಾಮ: ಸಂಶೋಧನೆಗಳ ಪ್ರಕಾರ ಈತನ ನಿಜವಾದ ಹೆಸರು ಪುಷ್ಪದತ್ತ, ‘ಸರ್ವಜ್ಞ’ ಎಂಬುದು ಕಾವ್ಯನಾಮ.
ತಂದೆ ತಾಯಿ
: ತಂದೆ ಕುಂಬಾರ ಮಲ್ಲ ಮತ್ತು ತಾಯಿ ಮಾಳೆ (ಮಾಳಲಾದೇವಿ).
ತಂದೆ ಕುಂಬಾರ ಮಲ್ಲ ತಾಯಿ ಮಾಳಲಾದೇವಿ ಇಂದು ಧರೆಗೆ
ಬಂದ ಚಂದ್ರಶೇಖರ ನಾನು ಸರ್ವಜ್ಞ
ಎಂದು ತನ್ನ ಹುಟ್ಟಿನ ಬಗ್ಗೆಯೇ ಹೇಳಿಕೊಂಡಿದ್ದಾನೆ.
ಸಾಹಿತ್ಯ ಮತ್ತು ತ್ರಿಪದಿಗಳ ವೈಶಿಷ್ಟ್ಯ
ತ್ರಿಪದಿ ಚಂದಸ್ಸು: ಮೂರು ಸಾಲುಗಳ ಪದ್ಯ ಪ್ರಕಾರವಾದ ತ್ರಿಪದಿಗೆ ಸರ್ವಜ್ಞ ಅತ್ಯಂತ ಪ್ರಸಿದ್ಧರಾಗಿದ್ದಾರೆ.
ಜಾತಿ ಪದ್ಧತಿಯ ವಿರೋಧ, ಮೂಢನಂಬಿಕೆಗಳ ಖಂಡನೆ, ನೀತಿ, ಕಾಯಕದ ಮಹತ್ವ, ಸ್ನೇಹ ಮತ್ತು ಲೌಕಿಕ ಜ್ಞಾನ ಇವರ ವಚನಗಳ ಮುಖ್ಯ ವಸ್ತುಗಳಾಗಿದ್ದವು.
ಸರಳ ಭಾಷೆ: ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಉಪಮೆ ಹಾಗೂ ಉದಾಹರಣೆಗಳನ್ನು ಬಳಸಿ ಕಾವ್ಯ ರಚಿಸಿದ್ದಾರೆ.
ಪ್ರಸಿದ್ಧ ವಚನ (ತ್ರಿಪದಿ)
ತಮ್ಮ ಜ್ಞಾನದ ಕುರಿತು ಸರ್ವಜ್ಞ ಅತ್ಯಂತ ವಿನಮ್ರವಾಗಿ ಹೀಗೆ ಹೇಳಿಕೊಂಡಿದ್ದಾರೆ:
“ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ
ಪರ್ವತವೆ ಆದ ಸರ್ವಜ್ಞ”
( ನಾನು ಹುಟ್ಟುತ್ತಲೇ ಎಲ್ಲವನ್ನೂ ತಿಳಿದ ಮಹಾಜ್ಞಾನಿಯಾಗಿರಲಿಲ್ಲ ಅಥವಾ ಅಹಂಕಾರದಿಂದ ಸರ್ವಜ್ಞನಾಗಲಿಲ್ಲ. ಸಮಾಜದಲ್ಲಿ ಸಿಗುವ ಪ್ರತಿಯೊಬ್ಬರಿಂದಲೂ ಒಂದೊಂದು ಒಳ್ಳೆಯ ವಿಷಯಗಳನ್ನು ಕಲಿತು ಜ್ಞಾನದ ಪರ್ವತವಾಗಿದ್ದೇನೆ) ಎಂದು ಹೇಳಿಕೊಂಡಿದ್ದಾನೆ.
ಸರ್ವಜ್ಞನು ಕಂಡ ಬಸವಣ್ಣ
ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬಸವಣ್ಣ ಮತ್ತು ಶರಣರ ಕಾರ್ಯವನ್ನು ನೆನೆಸಿದ್ದಾನೆ.
ಕನ್ನಡದ ಪ್ರಸಿದ್ಧ ತ್ರಿಪದಿ ಕವಿ ಸರ್ವಜ್ಞರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಾದ ವಿಶ್ವಗುರು ಬಸವಣ್ಣನವರ ಮಹಿಮೆ, ಭಕ್ತಿ ಮತ್ತು ಆದರ್ಶಗಳನ್ನು ತಮ್ಮ ಕೆಲವು ಪ್ರಮುಖ ತ್ರಿಪದಿಗಳಲ್ಲಿ ಅತ್ಯಂತ ಗೌರವದಿಂದ ಕೊಂಡಾಡಿದ್ದಾರೆ. ಲಿಂಗಾಯತ ಧರ್ಮ ಮತ್ತು ಸಮಾಜಕ್ಕೆ ಬಸವಣ್ಣನವರ ಕೊಡುಗೆಯನ್ನು ಸರ್ವಜ್ಞರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸರ್ವಜ್ಞ ಒಬ್ಬ ನೇರ ದಿಟ್ಟ ನಿರಂತರ ಕ್ರಾಂತಿಕಾರಿ ಕವಿ. ಒಂದು ಅರ್ಥದಲ್ಲಿ ಬಸವಣ್ಣನವರ ಶರಣರ ಕ್ರಾಂತಿಯ ವಾರಸುದಾರ.
ಬಸವಣ್ಣನವರ ಕುರಿತಾದ ಸರ್ವಜ್ಞನ ಪ್ರಮುಖ ತ್ರಿಪದಿಗಳು ಮತ್ತು ಅವುಗಳ ಸರಳ ಭಾವಾರ್ಥಗಳು
೧. ಲಿಂಗಾಯತ ಧರ್ಮದ ಕರ್ತೃ ಬಸವಣ್ಣ
ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ |
ಹುಸಿಮಾತನಾಡಿ ಕೆಡದಿರಿ ಲಿಂಗಾಯತಕೆ |
ಬಸವಣ್ಣನೆ ಕರ್ತೃ ಸರ್ವಜ್ಞ ||

ಬಸವ ಗುರುವಿನ ಮಹಿಮೆ ಮತ್ತು ಹೆಸರಿನ ಶಕ್ತಿ ಎಲ್ಲರಿಗೂ ತಿಳಿಯದು. ಸುಳ್ಳು ಮಾತುಗಳನ್ನಾಡಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಈ ಲಿಂಗಾಯತ ಧರ್ಮಕ್ಕೆ ಮತ್ತು ವೈಚಾರಿಕ ಸಮಾಜಕ್ಕೆ ಬಸವಣ್ಣನವರೇ ನಿಜವಾದ ಮೂಲಪುರುಷ ಅಥವಾ ಕರ್ತೃವಾಗಿದ್ದಾರೆ.
೨. ಬಸವ ನಾಮಸ್ಮರಣೆಯ ಮಹಿಮೆ
ಬಸವನೆಂದಡೆ ಪಾಪ ದೆಶೆಗೆಟ್ಟು ಹೋಗುವುದು |
ಬಸವನ ಪಾದವ ನಂಬಿದ ಭಕ್ತರು |
ಹಸನಾದರಯ್ಯ ಸರ್ವಜ್ಞ ||
ಬಸವ’ ಎಂಬ ಹೆಸರನ್ನು ಭಕ್ತಿಯಿಂದ ಉಚ್ಚರಿಸಿದರೆ ಸಾಕು, ಮನುಷ್ಯನ ಪಾಪಗಳೆಲ್ಲವೂ ದಿಕ್ಕೆಟ್ಟು ಓಡಿಹೋಗುತ್ತವೆ. ಬಸವಣ್ಣನವರ ತತ್ತ್ವಗಳನ್ನು ಮತ್ತು ಅವರ ಪಾದಗಳನ್ನು ನಂಬಿ ನಡೆದ ಭಕ್ತರ ಜೀವನವು ಅತ್ಯಂತ ಸುಂದರವಾಗಿ ಹಾಗೂ ಪಾವನವಾಗಿ ರೂಪಿತಗೊಂಡಿದೆ.
೩. ಬಸವಣ್ಣನೇ ಜಗದ ಗುರು
ಬಸವನೆ ಜಗದಾದಿ ಬಸವನೆ ಜಗದೀಶ |
ಬಸವನೇ ಜಗದ ಗುರುಪ್ರಣವವೆಂದರಿದು |
ಬಸವನನು ಜಪಿಸು ಸರ್ವಜ್ಞ ||
ಬಸವಣ್ಣನೇ ಈ ಜಗತ್ತಿನ ಕಲ್ಯಾಣದ ಆದಿಯಾಗಿದ್ದಾನೆ, ಅವನೇ ದೈವಸ್ವರೂಪಿಯಾಗಿದ್ದಾನೆ. ಬಸವಣ್ಣನೇ ಇಡೀ ಜಗತ್ತಿಗೆ ಓಂಕಾರದಂತಹ (ಪ್ರಣವ) ಜ್ಞಾನವನ್ನು ನೀಡಿದ ಜಗದ್ಗುರು ಎಂಬುದನ್ನು ಅರಿತು, ಸದಾ ಆತನ ನಾಮವನ್ನು ಜಪಿಸು.
ಸರ್ವಜ್ಞರು ತಮ್ಮ ಈ ತ್ರಿಪದಿಗಳ ಮೂಲಕ ಬಸವಣ್ಣನವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಸಮಾಜವನ್ನು ಉದ್ಧಾರ ಮಾಡಲು ಬಂದ ಸಾಕ್ಷಾತ್ ಶಿವ ಕಲ್ಯಾಣದ ಜ್ಯೋತಿಯಾಗಿ ಆರಾಧಿಸಿದ್ದಾರೆ. ಸರ್ವಜ್ಞ ಒಬ್ಬ ದಿಟ್ಟ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ವ್ಯಕ್ತಿ. ತನ್ನ ಅನಿಸಿಕೆ ಭಾವನೆಗಳನ್ನು ನೇರವಾಗಿ ಹೇಳುವ ಗಟ್ಟಿತನ ಹೊಂದಿರುವ ಅಪರೂಪದ ಕವಿ.
ಆಡು ಮುಟ್ಟದ ಸೊಪ್ಪಿಲ್ಲ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲ ಎನ್ನುವ ಜಾನಪದ ನಾಣ್ಣುಡಿಯಂತೆ ಸರ್ವಜ್ಞ ಎಲ್ಲಾ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಆರೋಗ್ಯ ಕುಟುಂಬ ಗಂಡ ಹೆಂಡತಿ ಸಂಬಂಧ ಆಹಾರ ವೈದಿಕ ವ್ಯವಸ್ಥೆಯ ವಿರುದ್ಧ ಟೀಕೆ ಹೀಗೆ ಎಲ್ಲಾ ವಿಷಯಗಳನ್ನು ತನ್ನ ತ್ರಿಪದಿಗಳಲ್ಲಿ ದಾಖಲಿಸಿದ್ದಾನೆ.
ಜಯಂತಿ
ಪ್ರತಿ ವರ್ಷ ಫೆಬ್ರವರಿ 20 ರಂದು ಸರ್ವಜ್ಞ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆಚರಿಸಲಾಗುತ್ತದೆ.
ಯಾವುದಾದರೂ ಒಂದು ವಿಶ್ವ ವಿದ್ಯಾಲಯದ ಆವರಣದಲ್ಲಿ ಸರ್ವಜ್ಞ ಪೀಠ ಸ್ಥಾಪಿಸಿ ಅವರ ಉಜ್ವಲ ಚಿಂತನೆ ಮಾನವ ಪ್ರೇಮ ಸಾಮಾಜಿಕ ಚಿಂತನೆಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು.


