ತೆಲಗಿ ಗ್ರಾಮದಲ್ಲಿ ಶಾಸಕ ಶಿವಾನಂದ ಎಸ್. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸರ್ಕಾರಿ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ರೈತರು ಮತ್ತು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವೆಂದು ಶಾಸಕ ಶಿವಾನಂದ ಎಸ್. ಪಾಟೀಲ ಹೇಳಿದರು.
ತಾಲೂಕಿನ ಕೂಡಗಿ ಎನ್‌ಟಿಪಿಸಿ ಕೇಂದ್ರದ ಸಮೀಪದ ತೆಲಗಿ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವತಿಯಿಂದ ನಿರ್ಮಿಸಲಾಗುವ 2×20 ಎಂವಿಎ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಭೂಮಿಪೂಜಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಅಡೆತಡೆಗಳು ಎದುರಾದರೆ ಕಾಮಗಾರಿಗಳು ಅರ್ಧಕ್ಕೆ ನಿಂತು ಸಾರ್ವಜನಿಕರಿಗೆ ಉಪಯೋಗವಾಗುವುದಿಲ್ಲ. ಆದ್ದರಿಂದ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರೈತರ ಜಮೀನುಗಳಿಗೆ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸಲು ವಿದ್ಯುತ್ ಅತ್ಯಾವಶ್ಯಕವಾಗಿದೆ. ಇತರೆ ರಾಜ್ಯಗಳಲ್ಲಿ ರೈತರಿಂದ ಪಂಪ್‌ಸೆಟ್‌ಗಳಿಗೆ ಹಣ ವಸೂಲಿ ಮಾಡಲಾಗುತ್ತಿದ್ದರೂ, ಕರ್ನಾಟಕದಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹೀಗಾಗಿ ವಿದ್ಯುತ್ ಲೈನ್‌ಗಳು ಹಾದುಹೋಗುವ ವೇಳೆ ಸರ್ಕಾರ ನಿಗದಿಪಡಿಸಿದ ಪರಿಹಾರವನ್ನು ಸ್ವೀಕರಿಸಬೇಕು,ಅನಾವಶ್ಯಕ ಬೇಡಿಕೆಗಳನ್ನು ಮುಂದಿರಿಸಬಾರದು ಎಂದು ಹೇಳಿದರು.
ಬಸವನಾಡಿನ ಜನರ ತ್ಯಾಗದಿಂದ ರಾಜ್ಯದ 11 ಜಿಲ್ಲೆಗಳ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ಮುಂದಿನ ದಿನಗಳಲ್ಲಿ ಕೃಷ್ಣಾ ನದಿ ತೀರ್ಪಿನ ಎ ಮತ್ತು ಬಿ ಯೋಜನೆಗಳ ವ್ಯಾಜ್ಯ ಪರಿಹಾರವಾದರೆ ವಿಜಯಪುರ ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡುವುದು ಖಚಿತ ಎಂದರು.
ಈ ಭಾಗದ ಕೂಡಗಿ ವಿಳ್ಯೆದೆಲೆ ಮತ್ತು ತೆಲಗಿ ಉಳ್ಳಾಗಡ್ಡಿಗೆ ಅಂತರಾಷ್ಟ್ರೀಯ ಮಟ್ಟದ ಮೆಘಾ ಮಾರುಕಟ್ಟೆ ಸ್ಥಾಪಿಸುವ ಕನಸು ಹೊಂದಿರುವುದಾಗಿ ತಿಳಿಸಿದರು.
ಆಲಮಟ್ಟಿ ಹಿನ್ನೀರಿನ ಸಮರ್ಪಕ ಬಳಕೆಗೆ ವಿದ್ಯುತ್ ಸ್ಟೇಷನ್‌ಗಳ ನಿರ್ಮಾಣ ಕೈಗೊಂಡಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರ ಜೀವನಮಟ್ಟ ಸುಧಾರಿಸಿದೆ. ಎಲ್ಲ ಯೋಜನೆಗಳು ತಾರತಮ್ಯವಿಲ್ಲದೆ ಜನರಿಗೆ ತಲುಪುವಂತೆ ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಟಿಸಿಎಲ್ ಬಾಗಲಕೋಟ ಅಧೀಕ್ಷಕ ಅಭಿಯಂತರ ರಮೇಶ ಪವಾರ, ತೆಲಗಿ, ಮಸೂತಿ, ಚಿಮ್ಮಲಗಿ ಮತ್ತು ಕೊಲ್ಹಾರ ಪ್ರದೇಶಗಳಲ್ಲಿ ಇದೇ ರೀತಿಯ ವಿದ್ಯುತ್ ವಿತರಣಾ ಕೇಂದ್ರಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಲ್ಲು ದೇಸಾಯಿ, ತಾನಾಜಿ ನಾಗರಾಳ, ತಾ.ಪಂ ಮಾಜಿ ಸದಸ್ಯ ಶಿವಾನಂದ ಅಂಗಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

