ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದೊಂದಿಗೆ ಕಲಾವಿದರು ಮತ್ತು ಸಾಹಿತಿಗಳು, ಸಂಗೀತಗಾರರು, ಶಿಕ್ಷಕರು ಹಾಗೂ ಸಾಂಸ್ಕೃತಿಕ ಚಿಂತಕರೊಂದಿಗೆ ಚರ್ಚೆ ಮತ್ತು ಚಹಾಕೂಟದ ಕಾರ್ಯಕ್ರಮವನ್ನು ಜ್ಞಾನಯೋಗಾಶ್ರಮ ಹತ್ತಿರವಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಉದ್ಯಾನವನದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಎಂ.ಎಸ್ ಮದಬಾವಿ, ಮಾತನಾಡುತ್ತಾ ಕಲೆ ಸಾಹಿತ್ಯ ಸಂಸ್ಕೃತಿ ಸಮಾಜದ ಅವಿಭಾಜ್ಯ ಅಂಗ ಈ ಕ್ಷೇತ್ರದ ಎಲ್ಲರೂ ಒಟ್ಟಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಸಂಘಟನೆ ಮಾಡುವುದು ಅತ್ಯವಶ್ಯಕ ಎಲ್ಲರೂ ಸೇರಿ ಚಿಂತನ ಮಂಥನ ಮಾಡುವುದು ಈಗಿನ ದಿನಮಾನಗಳಲ್ಲಿ ಅವಶ್ಯಕವಾಗಿದೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಲಿ ಸರ್ಕಾರ ಮತ್ತು ವಿವಿಧ ಅಕಾಡೆಮಿಗಳ, ಪ್ರಾಧಿಕಾರಗಳ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಬಹುದು ಎಂದು ಸಲಹೆ ನೀಡಿದರು. ಕಲಾಪೋಷಕರು ಹಾಗೂ ವೈದ್ಯರಾದ ಡಾ. ಸತೀಶ್ ಜಿಗಜಿನ್ನಿ ಮಾತನಾಡುತ್ತಾ, ಈಗಿನ ಯುವಕರು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಖ್ಯಾತರಾಗಲು ಹಲವಾರು ಯೋಜನೆಗಳಿವೆ ಸರ್ಕಾರ ಮತ್ತು ಇನ್ನಿತರ ಸಹಯೋಗದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಿದ್ದೆ ಆದಲ್ಲಿ, ಅವರ ಭವಿಷ್ಯ ಉಜ್ವಲವಾಗುತ್ತದೆ. ಈಗ ಇಲ್ಲಿ ಸೇರಿರುವ ನಾಡಿನ ವಿವಿಧ ಕ್ಷೇತ್ರದ ಗಣ್ಯರು ತಮ್ಮ ಸಲಹೆಗಳನ್ನು ಸಹಕಾರಗಳನ್ನು ನೀಡಿ ಪ್ರತಿ ತಿಂಗಳು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅತ್ಯಂತ ಅವಶ್ಯಕ. ಮುಂದಿನ ತಿಂಗಳ ಕಾರ್ಯಕ್ರಮದ ಪ್ರಾಯೋಜಕತ್ವವನ್ನ ನಾವು ವಹಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ, ನಾಟಕ, ಸಂಗೀತ, ಚಿತ್ರಕಲೆ, ಸಾಹಿತ್ಯ ಮತ್ತು ಸಾಮಾಜಿಕವಾಗಿ ಹಲವಾರು ವಿಷಯಗಳ ಚಿಂತನೆ ಮಾಡಲಾಯಿತು. ಇದನ್ನು ನಿರಂತರವಾಗಿ ಪ್ರತಿ ತಿಂಗಳು ವಿವಿಧ ಕಾರ್ಯಕ್ರಮಗಳ ಮೂಲಕ ಆಯೋಜಿಸಲು ತೀರ್ಮಾನಿಸಲಾಯಿತು.
ಹಿರಿಯ ಕಲಾವಿದರಾದ ವಿದ್ಯಾಧರ ಸಾಲಿಯವರು ಮಾತನಾಡುತ್ತಾ, ಸಾಹಿತ್ತಿಕ ಕಾರ್ಯಕ್ರಮಗಳಲ್ಲಿ ಚಿತ್ರ ಕಲಾವಿದರು, ಸಂಗೀತಗಾರರು, ನಾಟಕಕಾರರು, ಸಹಿತ ಎಲ್ಲ ಕಲಾವಿದರನ್ನು ಉದ್ಘಾಟಕರನ್ನಾಗಿ, ಅತಿಥಿಗಳನ್ನಾಗಿ, ಆಹ್ವಾನಿಸುವುದು ಅತ್ಯಂತ ಕಡಿಮೆ ಹಾಗೂ ವಿಷಾದದ ಸಂಗತಿ. ಇದರ ಬಗ್ಗೆ ಚಿಂತನೆ ಮಾಡುವುದು ಬಹಳ ಅವಶ್ಯಕತೆ ಸಾಹಿತಿಗಳಿಗೆ ಇರುವಷ್ಟು ಜನ ಬೆಂಬಲ ಹಾಗೂ ಸಾಂಸ್ಕೃತಿಕ ಬೆಂಬಲ ಎಲ್ಲ ಕಲಾವಿದರಿಗೂ ಸಿಗುವಂತಾಗಲಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹಿರಿಯ ಕಲಾವಿದರಾದ ಪಿ.ಎಸ್.ಕಡೇಮನಿ ಮಾತನಾಡುತ್ತ, ರಾಜ್ಯದಲ್ಲಿರುವ ಎಲ್ಲ ಕಲಾಶಾಲೆಗಳಿಗೆ ಮರುಜೀವ ನೀಡಿ ಪೂರ್ಣಾವಧಿ ಉಪನ್ಯಾಸಕರನ್ನು ನೇಮಿಸಿ ಉತ್ತೇಜನಗೊಳಿಸಬೇಕು ಹಾಗೂ ಮಾಧ್ಯಮಿಕ ಶಾಲೆಗಲಲ್ಲಿ ಕಲಾಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿರುವ ಸೂಕ್ತ ಕಲಾಚಟುಚಟಿಕೆಗಳಿಗೆ ಸರಕಾರಕ್ಕೆ ಆಗ್ರಹಮಾಡಿದರು.
ಸಂಗಣ್ಣ ಪಾಟೀಲ, ಕಲಾವಿದ ರಮೇಶ ಚವಾಣ್, ವಿದ್ಯಾಧರ ಸಾಲಿ, ಡಾ. ಜಿ.ಎಸ್. ಭೂಸಗೊಂಡ, ಡಾ, ವಿ.ಎಂ.ಬಾಗಾಯತ್, ಶಿವಾನಂದ ಅಥಣಿ, ಯಾಮಿನಿ ಶಹಾ, ಮಹಾಧೇವಿ ಕೊಪ್ಪದ, ಡಾ. ಶಶಿಕಲಾ ಹೂಗಾರ, ದಾಕ್ಷಾಯಣಿ ಇಮನಾದ, ಗಿರಿಜಾ ಪಾಟೀಲ, ಶಿವಣ್ಣ ಗೊಳಸಂಗಿ, ಶ್ರೀನಿವಾಸ ಸುಲಖೆ, ಆನಂದ ಮಹಾಂತಮಠ, ಭೀಮರಾಯ ಹಡಪದ, ಶಬ್ಬಿರ ನದಾಫ, ಇಂದ್ರಕುಮಾರ ದಸ್ತೆನ್ನವರ, ಡಾ. ಬಸವರಾಜ ಅನಗವಾಡಿ, ಸುಭಾಸಚಂದ್ರ ಕೆಂಭಾವಿ, ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಿದರು. ವಿದ್ಯಾಧರ ಸಾಲಿ ವಂದನಾರ್ಪಣೆ ನೆರವೇರಿಸಿದರು.

