ಜಮಖಂಡಿ ಭಾಗದಲ್ಲಿ ಮಹಿಳೆಯರಿಂದ ಭರದ ಸಿದ್ಧತೆ | ಶ್ಯಾವಿಗಿ, ಹಪ್ಪಳ, ಸಂಡಿಗೆ ಬಿಸಿಲಿಗೆ ಗರಿಗರಿ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಬೇಸಿಗೆ ಬಿಸಿಲಿನ ತಾಪ ನಮಗೆ ಸಹಿಸಲಸಾಧ್ಯ. ಆದರೆ ಶ್ಯಾವಿಗಿ, ಹಪ್ಪಳ, ಸಂಡಿಗೆ, ಚಕ್ಕುಲಿ ಇತರೆ ಅಡುಗೆ ಮನೆಯ ಕುರುಕುಲು ಪದಾರ್ಥಗಳ ತಯಾರಿಗೆ ಈ ವಸಂತ ಮಾಸ ಒಳ್ಳೆ ವಾತಾವರಣ..
ಹೌದು, ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದ ಹಳ್ಳಿಗರ ಮನೆಗಳ ಅಂಗಳ, ಮಹಡಿ ಮೇಲೆ ಈ ಹಪ್ಪಳ, ಶ್ಯಾವಿಗೆ, ಸಂಡಿಗೆ ಕಂಡು ಬರುತ್ತವೆ. ಇಡೀ ವರ್ಷದ ಊಟಕ್ಕೆ ನಂಚಿಕೆಗೆ ಬೇಕಾಗುವ ಈ ಪದಾರ್ಥ ರೆಡಿ ಮಾಡಿ, ಒಣಗಿಸಿ, ತುಂಬಿಟ್ಟುಕೊಳ್ಳುವ ವಾಡಿಕೆ ಇಲ್ಲಿದೆ.
ಬಯಲುಸೀಮೆ ಉತ್ತರ ಕರ್ನಾಟಕ ಭಾಗದ ಮನೆಯ ಮಹಿಳೆಯರು ಹರಟೆ ಹೊಡೆಯುತ್ತಾ, ಜನಪದ ಹಾಡು ಗುನುಗುತ್ತಾ ಇವುಗಳ ತಯಾರಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಸಾಮಾನ್ಯವಾಗಿ ಯುಗಾದಿ ಹಬ್ಬದ ಸುತ್ತಮುತ್ತ ಇಂಥ ಪದಾರ್ಥಗಳು ರೆಡಿಯಾಗುತ್ತವೆ.
ಮನೆ ಅಂಗಳದಲ್ಲಿ, ಚಾವಣಿಗಳಲ್ಲಿ ಈ ತಿನಿಸುಗಳು ಬಿಸಿಲಿಗೆ ಒಣಗುತ್ತಿವೆ. ಇವೇನೂ ಒಂದೆರಡು ದಿನಕ್ಕೆ ಆಗುವಷ್ಟು ಅಲ್ಲ. ಇಡಿ ವರ್ಷ ಬಳಸಲು ಬೇಕಾಗುವಷ್ಟು ತಯಾರಿಸಿಟ್ಟು ಕೊಳ್ಳುತ್ತಿದ್ದಾರೆ. ಈ ಋತುಮಾನ ಬಿಟ್ಟರೆ ಬೇರೆ ಯಾವ ಮಾಸವೂ ಇದಕ್ಕೆ ಪೂರಕವಲ್ಲ.
ಒಂದು ಹದವಾದ ಬಿಸಿಲಲ್ಲಿ ಒಣಗಿ ಗರಿಯಾಗುವ ಇವುಗಳಿಗೆ ಬೇಸಿಗೆಗಾಲವೇ ಸೂಕ್ತ ಕಾಲ. ಇಡೀ ವರ್ಷ ಎಣ್ಣೆಯ ಬಾಣಲೆಯಲ್ಲಿ ತೇಲಿ ಉಬ್ಬಿ, ಊಟದ ರುಚಿ ಹೆಚ್ಚಿಸುತ್ತವೆ. ಅಕ್ಕಿ, ಉದ್ದು, ಗೋಧಿ ಹಿಟ್ಟಿಗೂ ಈಗ ಬೇಡಿಕೆ ಹೆಚ್ಚಾಗಿದೆ. ಹಸಿ ಸಂಡಿಗೆ, ಶಾವಿಗೆ ಮತ್ತು ಹಪ್ಪಳವನ್ನು ಒತ್ತುವ ಸಾಧನದಿಂದ ತಯಾರಿಸಿ ಅದನ್ನು ಬಿರುಬಿಸಿಲಲ್ಲಿ ಒಣಗಿಸುತ್ತಾರೆ. ‘ಮುಂಜಾನೆಯೇ ಎದ್ದು ಹಿಟ್ಟನ್ನು ಬಿಸಿನೀರಿನಲ್ಲಿ ಚೆನ್ನಾಗಿ ಕುದಿಸುತ್ತೇವೆ. ಹದಕ್ಕೆ ಬಂದ ಮೇಲೆ ತೆಗೆದು ಮುದ್ದೆ ಮಾಡಿಕೊಂಡು ಒತ್ತುವ ಯಂತ್ರಕ್ಕೆ ತುಂಬಿ ಶಾವಿಗೆ, ಸಂಡಿಗೆ ಬಿಡಿಸಿಡುತ್ತೇವೆ. ಚೆನ್ನಾಗಿ ಒಣಗಿಸಿ ಡಬ್ಬಗಳಲ್ಲಿ ಎತ್ತಿಡುತ್ತೇವೆ’ ಎನ್ನುತ್ತಾರೆ ಚಿಕ್ಕಪಡಸಲಗಿ ಹಿರಿಯ ಅಜ್ಜಿ ಗಂಗಮ್ಮ.
ಬಿಸಿಲಿಗೆ ಚೆನ್ನಾಗಿ ಒಣಗುವ ಆಹಾರ ಪದಾರ್ಥಗಳು ಬಹಳ ದಿನಗಳವರೆಗೂ ಕೆಡುವುದಿಲ್ಲ. ಸಂಡಿಗೆ, ಹಪ್ಪಳ, ಶ್ಯಾವಿಗೆಗಳನ್ನು ಬೇಸಿಗೆ ದಿನಗಳಲ್ಲೇ ಮಾಡುತ್ತೇವೆ ಎಂದು ಹೇಳುತ್ತಾರೆ ಬೌರಮ್ಮ ಮತ್ತು ಸಾವಿತ್ರಿ.
“ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಪಟ್ಟಣ, ಗ್ರಾಮೀಣ ಮಹಿಳೆಯರು ಇಂಥ ಪದಾರ್ಥ ತಯಾರಿಸಿ ಬಿಸಿಲಲ್ಲಿ ಒಣಗಿಸಿ ತುಂಬಿಟ್ಟು ಕೊಳ್ಳುತ್ತೆವೆ ವರ್ಷದುದ್ದಕ್ಕೂ ಮನೆಯಲ್ಲಿ ಮದುವೆ, ಮುಂಜಿ ನಾಮಕರಣ, ಅತಿಥಿ ಸತ್ಕಾರ, ಹಬ್ಬ ಹರಿದಿನಗಳಲ್ಲಿ ಭೋಜನವನ್ನು ರುಚಿಯಾಗಿಸುತ್ತವೆ.”
– ಮದಿನಾ ಹಳ್ಳಿ ಚಿಕ್ಕಪಡಸಲಗಿ ಗ್ರಾಮಸ್ಥೆ
“ಉಪ್ಪು, ಖಾರ ಹಾಕಿದ ಹಸಿ ಮೆಣಸಿನಕಾಯಿ ಮಜ್ಜಿಗೆಯಲ್ಲಿ ನೆನೆಸಿಟ್ಟ ಬಳಿಕ ಅದನ್ನು ಚೆನ್ನಾಗಿ ಒಣಗಿಸಿ ನಂತರ ಬಳಸಿದರೆ ಅದರ ರುಚಿ ಹೇಳತೀರದು. ಬೇಸಿಗೆ ಕಾಲದಲ್ಲಿ ಇವುಗಳನ್ನು ಒಣಗಿಸಿದರೆ ಇಡೀ ವರ್ಷ ಅವು ಕೆಡುವುದಿಲ್ಲ.”
– ಗಂಗು ಕಂಕಣವಾಡಿ
ಚಿಕ್ಕಪಡಸಲಗಿ ಗ್ರಾಮಸ್ಥೆ

