ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರ ಆಕ್ರೋಶದ ಉತ್ತರ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಳಿಕೋಟೆ ತಾಲೂಕು ಅಂತಾ ಘೋಷಣೆ ಆಗಿದ್ದು ಬಿಜೆಪಿ ಸರ್ಕಾರದಲ್ಲಿ. ಆದರೆ ಮತಕ್ಷೇತ್ರದ ಶಾಸಕರು ತಮ್ಮ ಸರ್ಕಾರದಲ್ಲಿ ಆಗಿದ್ದು ಅಂತಾ ಹಸಿ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳೋದರಲ್ಲಿ ನಂ ೧ ಯಾರು ಅಂದರೆ ಅಪ್ಪಾಜಿ ನಾಡಗೌಡರು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಳ್ಳು ಹೇಳೋಕೂ ಇತಿ ಮಿತಿ ಇರಬೇಕು. ಹಿಂದೆ ನಾನು ಇವರ ಮನೆಗೆ ಹೋಗಿ ಬಾಗಿ ನಮಸ್ಕಾರ ಮಾಡಿದ್ದೀನಂತೆ. ಅಪ್ಪಾಜಿ ನಾಡಗೌಡರ ಮನೆಗೆ ನಾನು ನನ್ನ ಚಪ್ಪಲಿ ಕೂಡ ಬಿಟ್ಟಿಲ್ಲ. ಅವರ ಮನೆ ಮಾತ್ರ ಅಲ್ಲ ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕನ ಮನೆಗೂ ನಾನು ಹೋಗಿ ರಾಜಕಾರಣ ಮಾಡಿಲ್ಲ. ಅಪ್ಪಾಜಿ ನಾಡಗೌಡರೆ ನಿಮ್ಮ ಮನೆಗೆ ನಾನು ಬರೋದಾ ಥೂ..! ನಾಚಿಕೆ ಆಗೋಲ್ವಾ ನಿಮಗೆ ಸುಳ್ಳು ಹೆಳೋಕೆ. ಮಾನ ಮರ್ಯಾದೆ ಇದ್ರೆ ನೀವು ಕರೆಕ್ಟಾಗಿ ಮಾತಾಡೋಕೆ ಕಲೀರಿ. ನಾನು ನಿಮ್ಮ ಮನೆ ಬಾಗಿಲಿಗೆ ಬಂದು ತಲೆ ಬಾಗ್ಸಿದ್ದಕ್ಕೆ ಸಾಕ್ಷಿ ಕೊಟ್ಟರೆ ಇವತ್ತೆ ನನ್ನ ತಲೆ ತಕ್ಕೊಂಡು ಬಿಡ್ತೀನಿ. ಪದೇ ಪದೇ ನಿಮ್ಮ ಮನೆಗೆ ಬಂದಿದ್ದೀನಿ ಅಂತಾ ಹೇಳಿದರೆ ನೆಟ್ಟಗಿರೋದಿಲ್ಲ. ನಾನು ಬೇರೆ ಭಾಷೆ ಬಳಸ್ಬೇಕಾಗತ್ತೆ ಎಂದು ಎಚ್ಚರಿಸಿದರು.
ಮಾನಹಾನಿ ಮೊಕದ್ದಮೆ ಹಾಕುತ್ತೀರಾ ಹಾಕಿ, ಕೇಸ್ ಹಾಕೋಕೆ ಯಾರಾದರೂ ನಿಮಗೆ ಬೇಡ ಅಂದಿದ್ದಾರಾ? ಏನ್ ಹೆದರಿಸ್ತೀರಾ? ಎಂದು ಪ್ರಶ್ನಿಸಿದರು.
೨೦ಸಾವಿರ ಎಕರೆ ಭೂಮಿ ಲಪಟಾಯಿಸಿದೋರು
ಇವರು ಬ್ರಿಟೀಷರು ಗುಲಾಮರಾಗಿದ್ದರು. ೧೯೩೨ ರ ಹಿಂದೆ ರೆವಿನ್ಯೂ ಇಲಾಖೆಯ ದಫ್ತರ್‌ಗಳೆಲ್ಲ ಇವರ ಕೈಯಲ್ಲಿ ಇರ್ತಿತ್ತು. ಎಲ್ಲಾ ದಫ್ತರ್‌ಗಳನ್ನು ಇವರೇ ಬರೆಯುತ್ತಿದ್ದರು. ಜನರಿಗೆ ದೌರ್ಜನ್ಯ ಮಾಡಿ ಟ್ಯಾಕ್ಸ್ ಕಲೆಕ್ಟ್ ಮಾಡಿ ಕೊಡುತ್ತಿದ್ದರು, ಬ್ರಿಟೀಷರ ಏಜೆಂಟರು ಇವರು. ಹಿಂದೆ ಸರ್ಕಾರಿ ಭೂಮಿ ಆಗಿದ್ದವುಗಳೆಲ್ಲವನ್ನೂ ಇವರ ಹೆಸರಿನಲ್ಲಿ ಮಾಡ್ಕೋಂಡವ್ರೆ. ತೋರಿಸಲಾ ರೆಕಾರ್ಡು ನಾಡಗೌಡರೇ? ಎಲ್ಲಿ ಬರತೀರಿ ಚರ್ಚೆಗೆ ನಾನು ರೆಡಿ ಎಂದರು.
ಇವರು ಆಸ್ತಿ ದಾನ ಮಾಡಿರೋದಲ್ಲ, ಬಿಟ್ಟು ಕೊಡಬೇಕಾಗಿತ್ತು ಬಿಟ್ಟುಕೊಟ್ಟಿದ್ದಾರೆ.
ಊಳುವವನೆ ಒಡೆಯ ಕಾಯ್ದೆ ಬಂದಾಗ, ಬಿಟ್ಟು ಕೊಡಬೇಕಾಗಿರೋ ಆಸ್ತಿಯನ್ನ ಜನಕ್ಕೆ ಬಿಟ್ಟುಕೊಟ್ಟಿದ್ದಾರೆ. ಅದನ್ನೇ ದಾನ ಮಾಡಿದ್ದೀನಿ ಅಂತಾ ಹೇಳಿದ್ದಾರೆ. ಪಾಪ ಜನ ಮುಗ್ಧರು ಅವರಿಗೆ ಗೊತ್ತಾಗೊಲ್ಲ ಅಂತಾ ಹೀಗೆ ಹೇಳಿದ್ದಾರೆ ಎಂದು ಕುಟುಕಿದರು.
ಸುಮಾರು ಹೊತ್ತು ಶಾಸಕ ನಾಡಗೌಡರ ವಿರುದ್ಧ ಮಾಜೀ ಶಾಸಕ ನಡಹಳ್ಳಿ ಹರಿಹಾಯ್ದರು.
ಈ ವೇಳೆ ಭಾಜಪಾ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ, ಗಿರೀಶ್‌ಗೌಡ ಪಾಟೀಲ್, ಮದನಸ್ವಾಮಿ, ಕೆಂಚಪ್ಪಣ್ಣ ಬಿರಾದಾರ, ಶಂಕರಗೌಡ ಶಿವಣಗಿ, ವೈ.ಟಿ.ಗೌಡರ್, ಶೋಕ್ ರಾಠೋಡ್, ಸಿದ್ದರಾಜ ಹೊಳಿ, ಬಸವರಾಜ್ ಚಿತ್ತರಗಿ, ಸಂಗನಗೌಡ ಪಾಟೀಲ್, ಚೇತನ ಸಂಗಮ್, ಸಹನಾ ಬಡಿಗೇರ್, ಅಪ್ಪಣ್ಣ ದನ್ನೂರ್, ಶ್ರೀಶೈಲ್ ದೊಡಮನಿ, ಸಂಗಮ್ಮ ದೇವರಳ್ಳಿ, ಮಲ್ಲಣ್ಣ ತಂಗಡಗಿ, ಹರೀಶ್ ನಾಟಿಕಾರ್, ಮಹಾಂತೇಶ್ ಗಂಗನಗೌಡರ, ನಾಗೇಶ್ ಕವಡಿಮಟ್ಟಿ, ಸಂತೋಷ್ ಗೌಡರ್ ಇದ್ದರು.

