ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಅಕುಶಲ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ ಉದ್ಯೋಗ ಖಾತರಿ ಹಾಗೂ ಜೀವನೋಪಾಯ ಅಭಿಯಾನ (ಗ್ರಾಮೀಣ) (ವಿಬಿ-ಜಿರಾಮ್-ಜಿ) ಯೋಜನೆಯಡಿ ಆಗಸ್ಟ್ ೧೫ರಿಂದ ಸೆಪ್ಟೆಂಬರ್ ೧೫ರವರೆಗೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಾಳಿಕೋಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಅನುಸೂಯಾ ಚಲವಾದಿ ಹೇಳಿದರು.
ಅವರು ತಾಲೂಕಿನ ಬ.ಸಾಲವಡಗಿ ಗ್ರಾಮ ಪಂಚಾಯಿತಿಯಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಬರ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳು ನಡೆಯದೆ, ಸ್ಥಳೀಯ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಇದರಿಂದ ಗ್ರಾಮೀಣ ಜನರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಬಿ-ಜಿರಾಮ್-ಜಿ ಯೋಜನೆಯಡಿ ಅರ್ಹ ಗ್ರಾಮೀಣ ಜನರಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸಿ, ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಜಾಬ್ ಕಾರ್ಡ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಾಯಕ ನಿರ್ದೇಶಕರು (ಗ್ರಾ.ಉ) ಪಿ.ಎಸ್. ಕಸನಕ್ಕಿ ಮಾತನಾಡಿ, ಜಾಬ್ ಕಾರ್ಡ್ ಮೇಳದ ಮೂಲಕ ಗ್ರಾಮೀಣ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು, ಯೋಜನೆಯಡಿ ಲಭ್ಯವಿರುವ ಅಕುಶಲ ಕೆಲಸಗಳು ಹಾಗೂ ವೈಯಕ್ತಿಕ ಸೌಲಭ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದ ಅವರು ಜೀವನೋಪಾಯ ಭದ್ರತೆಗಾಗಿ ಉದ್ಯೋಗ ಸೃಜನೆ, ಬರ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಹಾಗೂ ಕೂಲಿಕಾರರ ವಲಸೆ ತಡೆಯುವ ನಿಟ್ಟಿನಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
೭೦ ಜನರಿಂದ ಅರ್ಜಿ ಜಾಬ್ ಕಾರ್ಡ್
ಮೇಳದಲ್ಲಿ ೩೦ ಜನರು ಹೊಸ ಉದ್ಯೋಗ ಚೀಟಿಗಾಗಿ ಅರ್ಜಿ ಸಲ್ಲಿಸಿದರೆ, ೪೦ ಜನರು ಕೂಲಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದರು. ಇದರಿಂದ ಗ್ರಾಮೀಣ ಜನರಲ್ಲಿ ಯೋಜನೆಯ ಕುರಿತು ಉತ್ತಮ ಸ್ಪಂದನೆ ವ್ಯಕ್ತವಾಯಿತು.
“ಗ್ರಾಮೀಣ ಜನರಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗ ಒದಗಿಸಿ, ಆರ್ಥಿಕ ಸ್ವಾವಲಂಬನೆ ಹಾಗೂ ಜೀವನೋಪಾಯ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಜಾಬ್ ಕಾರ್ಡ್ ಮೇಳ ಮಹತ್ವದ ಹೆಜ್ಜೆಯಾಗಿದೆ.”
– ಶ್ರೀಮತಿ ಅನುಸೂಯಾ ಚಲವಾದಿ
ತಾಪಂ ಇಓ, ತಾಳಿಕೋಟೆ

