ಸ್ಟೇಡಿಯಂನಲ್ಲಿ ಈಜುಕೊಳ ನಿರ್ಮಿಸಲು ರೂ.5 ಕೋಟಿಗೆ ಸಿಎಂಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ಈಗಾಗಲೇ 5 ಕೋಟಿ ಅನುದಾನ ಬಿಡುಗಡೆ ಆಗಿದ್ದು ಒಳಾಂಗಣ ಕ್ರೀಡಾಂಗಣದಲ್ಲಿ ನಾಲ್ಕು ಶಟಲ್ ಕಾಕ್ ಕೋರ್ಟ್, ಫುಟ್ಬಾಲ್, ವಾಲಿಬಾಲ್ , ಕಬಡ್ಡಿ, ಖೋ ಖೋ ಕೋರ್ಟ್ ನಿರ್ಮಿಸಲು ಕೆಲಸ ನಡೆಯುತ್ತಿದೆ. ಜೊತೆಗೆ
ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಈಜು ಕೊಳ ನಿರ್ಮಿಸಲು ಮತ್ತೆ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಹಂತ ಹಂತವಾಗಿ ಕ್ರೀಡಾಂಗಣ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಅರಣ್ಯ ಇಲಾಖೆ, ಮೈಸೂರು ಪ್ರಾದೇಶಿಕ ವಿಭಾಗ ಮತ್ತು ಹಾರ್ಟ್ ಸಂಸ್ಥೆ, ಮೈಸೂರು ಸಹಯೋಗದೊಂದಿಗೆ ಆಯೋಜನೆ ಮಾಡಿರುವ ಹುಲಿಮಿತ್ರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು.
ಮಹನೀಯರ ಜಯಂತಿ ಹೆಸರಿನಲ್ಲಿ, ಫ್ರೆಂಡ್ಸ್ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತೆ. ಆದರೆ ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿರುವುದು ತುಂಬಾ ವಿಭಿನ್ನ ಜೊತೆಗೆ ವಿಶೇಷತೆಯಾಗಿದೆ. ಹೀಗಾಗಿ ಒಂದು ವರ್ಷಕ್ಕೆ ಸೀಮಿತ ಮಾಡದೆ ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನ ಆಯೋಜನೆ ಮಾಡಬೇಕು, ನಮ್ಮ ತಾಲೂಕಿನ ಹಾಡಿ ಮಕ್ಕಳು ಕೂಡ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡುತ್ತಿದ್ದಾರೆ. ಹೀಗಾಗಿ ಕ್ರೀಡೆಗೆ ಒತ್ತು ಕೊಡುವ ನಿಟ್ಟಿನಲ್ಲಿ ನಾನು ಸಂಪೂರ್ಣವಾಗಿ ಸಹಕರಿಸುತ್ತೇನೆ. ಮಾನವ ಮತ್ತು ಹುಲಿಗಳ ನಡುವೆ ಸಂಘರ್ಷ ಕಡಿಮೆಯಾಗಿದೆ ಸರ್ಕಾರ ಯಾವಾಗಲೂ ಅರಣ್ಯ ಇಲಾಖೆಯ ಜೊತೆಗಿರುತ್ತದೆ ಎಂದು ಹೇಳಿದರು.
ಡಿಸಿಎಫ್ ಪರಮೇಶ್ ಮಾತನಾಡಿ, ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಹುಲಿ ದಾಳಿ ಪ್ರಕರಣಗಳಿಂದ ಜನರು ಆತಂಕಗೊಂಡಿದ್ದಾರೆ. ಹೀಗಾಗಿ ಸಾರ್ವಜನಿಕರ ಜೊತೆ ಅರಣ್ಯ ಅಧಿಕಾರಿಗಳು ಬೆರೆತು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಹುಲಿಗಳು ಕಾಡು ಬಿಟ್ಟು ನಾಡಿಗೆ ಯಾಕೆ ಬರುತ್ತಿವೆ ಎಂಬುದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಈ ವರ್ಷದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಣಬೆ ಬೇಸಾಯ ತರಬೇತಿ ಕಾರ್ಯಗಾರ, ಕ್ಯಾಂಟೀನ್ ತರಬೇತಿ ಜೊತೆಗೆ ಜನ-ಜಾನುವಾರುಗಳ ಆರೋಗ್ಯ ತಪಾಸಣೆ ಹಮ್ಮಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಅನೇಕ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತೆ ಎಂದರು
ಕಾರ್ಯಕ್ರಮದಲ್ಲಿ ಹೆಚ್.ಡಿ. ಕೋಟೆ ವಲಯ ಅರಣ್ಯಾಧಿಕಾರಿ ರವಿಕುಮಾರ್, ಡಾ ಲೋಕೇಶ್, ಹೆಚ್. ಡಿ. ಕೋಟೆ ಪುರಸಭೆ ನಿಕಟ ಪೂರ್ವ ಸದಸ್ಯ ಮಧುಕುಮಾರ್, ತೀರ್ಪುಗಾರರಾದ ಭಾಸ್ಕರ್, ಮಂಜುನಾಥ, ರಾಕಿ, ಶಿವಕುಮಾರ್, ಮಂಜುನಾಥ, ಲೋಕೇಶ್, ಸುರೇಂದ್ರ, ವಸಂತ, ಅಭಿಲಾಷ್, ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್, ಸಂಯೋಜಕರ ಶಿವಲಿಂಗ ಸೇರಿದಂತೆ ಕ್ರಿಕೆಟ್ ಆಟಗಾರರು ಉಪಸ್ಥಿತರಿದ್ದರು.

