ರಾಜ್ಯದ ೧೦ ಸಾವಿರ ಶಿಕ್ಷಕರಿಗೆ ಸರ್ಕಾರದಿಂದ ಯುಗಾದಿ ಕೊಡುಗೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕಳೆದ ನಾಲ್ಕು ವರ್ಷಗಳಿಂದ ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ, ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ (ಎಎಂ ಟೂ ಎಚ್ ಎಂ) ಪದೋನ್ನತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಇದರಿಂದ ರಾಜ್ಯದ ೧೦ ಸಾವಿರಕ್ಕೂ ಅಧಿಕ ಸಹಶಿಕ್ಷಕರಿಗೆ ಬಡ್ತಿಭಾಗ್ಯ ಸಿಗಲಿದೆ.
ಇದು ಸಂಘದ ನಿರಂತರ ಪ್ರಯತ್ನಕ್ಕೆ ಒಲಿದ ಫಲ ಹಾಗೂ ಶಿಕ್ಷಕರಿಗೆ ಯುಗಾದಿ ಹಬ್ಬಕ್ಕೆ ಸರ್ಕಾರ ನೀಡಿದ ಕೊಡುಗೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಬಣ್ಣಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಬದಲಾವಣೆಗಳು, ನಾನಾ ಕಾನೂನು ತೊಡಕುಗಳು, ನ್ಯಾಯಾಲಯದ ಪ್ರಕರಣಗಳ ಹಿನ್ನಲೆಯಲ್ಲಿ ಸಹಶಿಕ್ಷಕರು ಮುಖ್ಯ ಶಿಕ್ಷಕರ ಹುದ್ದೆಯಿಂದ ವಂಚಿತಗೊAಡಿದ್ದರು. ಹಲವಾರು ಶಿಕ್ಷಕರು ಬಡ್ತಿಯಿಲ್ಲದೇ ನಿವೃತ್ತರಾಗಿದ್ದರು.
ಅದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಸಂಘ ಹೋರಾಟ ನಡೆಸಿತ್ತು. ಅದರಲ್ಲಿಯೂ ಕಳೆದ ಏಳು ತಿಂಗಳಿAದ ನಿರಂತರ ಹೋರಾಟದ ಫಲವಾಗಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ ಸರ್ಕಾರ ಬದಲಾವಣೆ ಮಾಡಿತ್ತು.
ಕಳೆದ ಫೆ ೨೮ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘ ಹಮ್ಮಿಕೊಂಡ ರಾಜ್ಯ ಮಟ್ಟದ ಬೃಹತ್ ಶೈಕ್ಷಣಿಕ ಸಮ್ಮೇಳನದಲ್ಲಿಯೂ ಸಂಘ ಬಡ್ತಿ ನೀಡುವಂತೆ ಒತ್ತಾಯಿಸಿತ್ತು. ಅದರ ಮುನ್ನಾದಿನ ಫೆ ೨೭ ರಂದೇ ಬಡ್ತಿ ನಿಯಮವಾಳಿಗಳನ್ನು ಇಲಾಖೆ ಪ್ರಕಟಿಸುವಂತೆ ಸಂಘ ಕ್ರಮ ಕೈಗೊಂಡಿತ್ತು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಬಡ್ತಿ ನೀಡುವ ಭರವಸೆಯನ್ನು ನೀಡಿದ್ದರು.
ಮಾಚರ್uಟಿಜeಜಿiಟಿeಜ ೧೩, ೨೦೨೬ ರಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದಲ್ಲಿ (ಕೆಎಟಿ) ಪ್ರಕರಣದಲ್ಲಿ ಅಂತಿಮ ನಿಯಮಗಳ ಅಫಿಡವಿಟ್ ಸಲ್ಲಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಕೋರ್ಟ್ ಪ್ರಕರಣ ಇತ್ಯರ್ಥಗೊಳ್ಳುವಂತೆ ಮಾಡುವಲ್ಲಿ ಶಿಕ್ಷಕರ ಸಂಘ ಯಶಸ್ವಿಯಾಗಿದೆ.
ನಂತರ ಬಡ್ತಿ ನೀಡುವಂತೆ ಆದೇಶ ಮಾಡಿಸಲು ಸಂಘ ಪ್ರಯತ್ನಿಸಿತ್ತು. ಅದರ ಫಲವಾಗಿ ಇಲಾಖೆ ಬಡ್ತಿ ನೀಡುವಂತೆ ಆದೇಶ ಹೊರಡಿಸಿದೆ.
ಅಧಿಕಾರಿಗಳಿಗೆ ಧನ್ಯವಾದ:
ಬಡ್ತಿ ಪ್ರಕ್ರಿಯೆಗೆ ಸಹಕರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ರಶ್ಮಿ ಮಹೇಶ್, ವಿಕಾಸ್ ಸುರಳ್ಕರ್ ಮತ್ತು ಅನಿತಾ ನಜಾರೆ ಅವರಿಗೆ ಶಿಕ್ಷಕರ ಸಂಘವು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದೆ.
ಜಿಲ್ಲಾ ಘಟಕಗಳಿಗೆ ಸೂಚನೆ
ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ತಕ್ಷಣವೇ ಆಯಾ ಜಿಲ್ಲೆಯ ಉಪನಿರ್ದೇಶಕರನ್ನು (ಡಿಡಿಪಿಐ) ಭೇಟಿ ಮಾಡಿ, ಬಡ್ತಿ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಆರಂಭಿಸಲು ಮನವಿ ಸಲ್ಲಿಸುವಂತೆ ಸಂಘದ ರಾಜ್ಯ ಘಟಕ ಮನವಿ ಮಾಡಿದೆ.

