ಉದಯರಶ್ಮಿ ದಿನಪತ್ರಿಕೆ
ಹೆಚ್.ಡಿ.ಕೋಟೆ/ಸರಗೂರು: ತಾಲೂಕಿನ ಅಧಿದೇವತೆ ಶ್ರೀಚಿಕ್ಕದೇವಮ್ಮ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಜೈಕಾರದ ನಡುವೆ ಕಪಿಲಾ ನದಿ ದಡದ ಹಾಲುಗಡದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪ್ರತಿವರ್ಷ ಯುಗಾದಿ ಹಬ್ಬದ ದಿನ ಜಾತ್ರೆ ನಡೆಯುವುದು ವಿಶೇಷ. ಜಾತ್ರೆ ಹಿನ್ನೆಲೆಯಲ್ಲಿ ಒಂದು ವಾರದಿಂದ ದೇವಾಲಯವನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಳಿಸಲಾಗಿತ್ತು. ಹಲವು ಫಲಪುಷ್ಪ, ಬಾಳೆ, ಮಾವಿ ಎಲೆಗಳಿಂದ ಸಿಂಗಾರಗೊಂಡಿದ್ದ ದೇವಾಲಯದ ಒಳಾಂಗಣ ಪ್ರದೇಶವು ಅತ್ಯಂತ ಆಕರ್ಷಣೀಯವಾಗಿ ಅಲಂಕಾರ ಮಾಡಿದ್ದರಿಂದ ಭಕ್ತರು ಹಾಗೂ ನೋಡುಗರ ಮನಸೂರೆಗೊಂಡಿತ್ತು.
ದೇವಾಲಯದ ಪಾರುಪತ್ತೇದಾರ್ ಮಹದೇವಸ್ವಾಮಿ ನೇತೃತ್ವದಲ್ಲಿ ಮುಂಜಾನೆ 3:30ರಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಂಪ್ರದಾಯದಂತೆ ಕಾಲ್ನಡಿಗೆಯಲ್ಲಿ ಬರುವ ಭಕ್ತರು ಕಪಿಲಾ ನದಿಯಲ್ಲಿ ಮಿಂದೆದ್ದು, ಬಾಯಿಬೀಗ ಹಾಕಿಸಿಕೊಂಡು ಬೆಟ್ಟ ಏರಿದರು. ಇಟ್ನ, ಚಾಮೇ ಗೌಡನ ಹುಂಡಿ, ಪುರದಕಟ್ಟೆ, ಶಾಂತಿಪುರ ಮತ್ತು ಕುಂದೂರ ಸೇರಿದಂತೆ ಅನೇಕ ಗ್ರಾಮಗಳ ಮಹಿಳೆಯರು ಜಾನಪದ, ಧಾರ್ಮಿಕ ಗೀತೆಗಳನ್ನು ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು.
ಮಂಗಳವಾದ್ಯ, ಸತ್ತಿಗೆ, ಸೂರಿಪಾನಿ ಸಮೇತ ಅಲಂಕೃತ ಉತ್ಸವ ಮೂರ್ತಿಯನ್ನು ಹೊತ್ತ ಇಟ್ನ ಗ್ರಾಮಸ್ಥರು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಬಾಣ, ಬಿರುಸು, ಸಿಡಿಮದ್ದಿನೊಂದಿಗೆ ಬೆಟ್ಟದಿಂದ ಕಾಲ್ನಡಿಗೆಯಲ್ಲಿ ಹಾಲುಗಡದ ಜಪದ ಕಟ್ಟೆಗೆ ತಂದು ಪ್ರತಿಷ್ಠಾಪಿಸಲಾಯಿತು.
ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಕಡೆಗಳಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದರು.
ಜೆಡಿಎಸ್ ಮುಖಂಡ ಕೆಎಂ ಕೃಷ್ಣನಾಯಕ ಇಟ್ನಾ ಗ್ರಾಮಕ್ಕೆ ಭೇಟಿ ನೀಡಿ ತಾಯಿ ಚಿಕ್ಕದೇವಮ್ಮ ಆಶೀರ್ವಾದ ಪಡೆದರು.
ಇನ್ನು ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೊಡ್ಡವೀರನಾಯಕ, ಎನ್ ಬಸವನಾಯಕ, ಸಿದ್ದರಾಜು, ಬಸವರಾಜು, ಜಯರಾಮ, ಕಾಳಿಂಗನಾಯಕ, ಲಿಂಗರಾಜು, ಬೆಟ್ಟನಾಯಕ, ಚಿನ್ನನಾಯಕ, ರವಿಕುಮಾರ್, ನಾಗನಾಯಕ, ರಾಮನಾಯಕ, ನಾಗೇಂದ್ರ, ಡೈರಿ ಬೆಟ್ಟನಾಯಕ, ಸಿದ್ದರಾಜು, ಚಾಮನಾಯಕ, ಸಣ್ಣಸ್ವಾಮಿ ನಾಯಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

