ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಮೈಗೂರ ಗ್ರಾಮದ ಬಳಿ ಹರಿಯುವ ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ಯುವಕನೋರ್ವ ಮುಳುಗಿ ಮೃತ ಪಟ್ಟಿರುವ ದುರ್ಘಟನೆ ನಡೆದಿದೆ.
ಮೃತ ಯುವಕನನ್ನು 19 ವರ್ಷದ ನಿಂಗರಾಜ ಸದಾಶಿವ ಪಾಟೀಲ ಎಂದು ಗುರುತಿಸಲಾಗಿದೆ. ಈಜುವ ವೇಳೆ ಆಳವಾದ ನೀರಿಗೆ ಸಿಲುಕಿ ನಿಯಂತ್ರಣ ತಪ್ಪಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ನದಿಯಲ್ಲಿನ ಮೃತ ದೇಹವನ್ನು ಹೊರತೆಗೆದರು.
ಅವರೊಂದಿಗೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಮಖಂಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಈ ಘಟನೆ ಗ್ರಾಮದಲ್ಲಿ ಶೋಕಮಯ ವಾತಾವರಣವನ್ನು ನಿರ್ಮಿಸಿದೆ.
ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

