ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗಂಡಾಂತರ ಗರ್ಭಿಣಿಯರ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ಒಳಪಡಿಸಬೇಕು. ಆರಂಭಿಕ ಹಂತದಲ್ಲಿ ಅನೀಮಿಯಾ, ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಉಚಿತ ಆರೋಗ್ಯ ಚಿಕಿತ್ಸೆಯನ್ನು ನೀಡವಂತಾಗಬೇಕು. ಕೈಗೊಳ್ಳುವ ಈ ಉಪಕ್ರಮದಿಂದ ತಾಯಿ-ಶಿಶು ಮರಣ ಪ್ರಮಾಣ ಶೂನ್ಯಕ್ಕೆ ತರಲು ಸೂಚಿಸಿದರು.
ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆರೋಗ್ಯ ಸೌಧ, ಸಭಾ ಭವನದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಕುರಿತು ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತಾಯಿ-ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಆರ್.ಸಿ.ಹೆಚ್. ಪೊರ್ಟಲ್ ಮೂಲಕ ಗರ್ಭಿಣಿಯರಿಗೆ ಕಾಲಕಾಲಕ್ಕೆ ಆರೋಗ್ಯ ಮಾಹಿತಿ ಒದಗಿಸುವ ಜೊತೆಗೆ ತಾಯಿ-ಶಿಶು ಮರಣ ತಡೆಯಲು ಸರ್ಕಾರ ಹತ್ತಾರು ಕಾರ್ಯಕ್ರಮ ರೂಪಿಸಿ ಜಾರಿಗೊಳಿಸುತ್ತಿದೆ. ಈ ಬಗ್ಗೆ ಜಾಗೃತಿಗೆ ಮಹತ ನೀಡಿ ಮಾಹಿತಿ ನೀಡುವರಿಂದ ಹೆರಿಗೆಯಾಗಿ ಮಗುವಿಗೆ ಒಂದು ವರ್ಷ ಪೂರ್ಣಗೊಳ್ಳುವವರೆಗ ಪಡೆಯಬೇಕಾದ ಚಿಕಿತ್ಸೆ, ಲಸಿಕೆ ಸೌಲಭ್ಯಗಳ ಪ್ರತಿ ತಿಂಗಳ ಮಾಹಿತಿಯನ್ನು ಕಾಲೋಚಿತಗೊಳಿಸಬೇಕು. ಜೊತೆಗೆ ಆರೋಗ್ಯ ಸೇವಾ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ತಪ್ಪದೇ ನೀಡಬೇಕು. ಪ್ರತಿ ತಿಂಗಳು ಗರ್ಭಿಣಿಯರ ಹೆಸರು ನೋಂದಣಿ, ಆಶಾ ಕಾರ್ಯಕರ್ತೆಯರ ಮನೆ ಮನೆ ಭೇಟಿ ಆರೋಗ್ಯ ವಿವರ ದಾಖಲು, ಸಕಾಲದಲ್ಲಿ ಆರೋಗ್ಯ ಸೇವೆಯನ್ನು ನೀಡಿ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡಿ ತಾಯಿ-ಶಿಶು ಮರಣ ಪ್ರಮಾಣ ಜಿಲ್ಲೆಯಲ್ಲಿ ಶೂನ್ಯಕ್ಕೆ ತರಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ, ತಾಲೂಕಾ ಆರೋಗ್ಯ ಅಧಿಕಾರಿಗಳಿಗೆ ಹಾಗೂ ಎಲ್ಲ ವೈದ್ಯರಿಗೆ ಸೂಚಿಸಿದರು.
ಹೆಚ್.ಪಿ.ವ್ಹಿ ಲಸಿಕೆ ಪ್ರಗತಿ ಸಾಧಿಸಬೇಕು. ಪ್ರಸಕ್ತ ಶೈಕ್ಷಣಿಕ ಸಾಲಿಗೆ ಶಾಲೆಗಳು ಆರಂಭವಾಗಿದ್ದು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ೧೪ ವರ್ಷದ ಎಲ್ಲ ಹೆಣ್ಣು ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ ನೀಡಿ, ನೂರರಷ್ಟು ಪ್ರಗತಿ ಸಾಧಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ದಢಾರ ರುಬೇಲಾ ಲಸಿಕೆ ೧ ರಲ್ಲಿ ಪಡೆದ ಮಕ್ಕಳ ಸಂಖ್ಯೆ ಹಾಗೂ ಎಮ್ ಆರ್ ೨ರಲ್ಲಿ ಪಡೆದ ಲಸಿಕೆ ವ್ಯತ್ಯಾಸವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪರಿಶೀಲನೆ ಮಾಡಿ ಲಸಿಕೆ ಪಡೆಯದ ಮಕ್ಕಳ ತಾಯಂದಿಯರಿಗೆ ಆಪ್ತಸಮಾಲೋಚನೆ ಮಾಡಿ ಲಸಿಕೆ ಹಾಕಿಸಲು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾಸಂಪತ್ತ ಗುಣಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳ್ಳಿ, ಡಬ್ಲ್ಯೂ,ಹೆಚ್.ಓ ಅಧಿಕಾರಿ ಡಾ. ಮುಕುಂದ ಗಲಗಲಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಪರಶುರಾಮ ಹಿಟ್ನಳ್ಳಿ, ಡಾ. ಎಂ. ಬಿ ಬಿರಾದಾರ, ಡಾ. ಅರ್ಚನಾ ಕುಲಕರ್ಣಿ, ಡಾ.ಜಾನ್ ಕಟವಟೆ, ಡಾ.ಅಪ್ಪಾಸಾಹೇಬ ಇನಾಮದಾರ, ಡಾ.ರಾಜೇಶ್ವರಿ ಗೋಲಗೇರಿ, ಡಾ. ಕೆ ಡಿ ಗುಂಡಬಾವಡಿ ಸೇರಿದಂತೆ ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

