ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ನಭೋಮಂಡಲದಲ್ಲಿ ಶನಿವಾರ ಬೆಳಗ್ಗೆ 10:30 ಕ್ಕೆ ತಾಲ್ಲೂಕಿನ ಘೋಣಸಗಿ ಗ್ರಾಮದಲ್ಲಿ ಸೂರ್ಯನ ಸುತ್ತಲೂ ವೃತ್ತಾಕಾರವಾಗಿ ಕಾಮನಬಿಲ್ಲಿನಂತೆ ಉಂಗುರಾಕಾರ ಕಾಣಿಸಿಕೊಂಡಿತು. ಪ್ರಕೃತಿ ವಿಸ್ಮಯದ ಕೌತುಕವನ್ನು ಕಣ್ಣಾರೆ ಕಂಡು ಯುವಕರು, ಶಾಲಾ ಮಕ್ಕಳು ಹಳ್ಳಿಯ ಜನರು ಕಣ್ಣು ಕುಕ್ಕಿಸುವ ಸೂರ್ಯನ ಕಿರಣಗಳು ಪ್ರಕಾಶಮಾನವಾಗಿದ್ದರೂ ಈ ಕೌತುಕವನ್ನು ನೋಡಿ ನಿಬ್ಬೆರಗಾದರು.
ಏಳು ಬಣ್ಣಗಳ ಕಾಮನಬಿಲ್ಲಿನ ಕುರಿತು ಹಾಗೂ ನಕ್ಷತ್ರಗಳು ಮತ್ತು ಉಪಗ್ರಹಗಳ ಸೂತ್ತಲೂ ಆವರಿಸುವ ಉಂಗುರ ವ್ಯವಸ್ಥೆ ಕುರಿತು ಪಠ್ಯ ಪುಸ್ತಕಗಳಲ್ಲಿ ವಿಧ್ಯಾರ್ಥಿಗಳು ಅರಿತುಕೊಳ್ಳುತ್ತಿದ್ದರು. ಶಾಲಾ ಮಕ್ಕಳು ಶಾಲಾ ಆವರಣದಲ್ಲೆ ಕಾಣುವ ಈ ನೈಜ ಪ್ರಕೃತಿ ವಿಸ್ಮಯ ಕಂಡು ಶಿಕ್ಷಕರಿಂದ ಮಾಹಿತಿ ಪಡೆದಕೊಂಡರು.
ವಾತಾವರಣದ ಮೇಲ್ಭಾಗದಲ್ಲಿರುವ ಹನಿಗಳು ಮತ್ತು ಮಂಜಿನ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ ವಕ್ರೀಭವನಗೊಂಡು ಈ ರೀತಿಯ ‘ಸನ್ ಹ್ಯಾಲೋ (Sun Halo)’ ಅಥವಾ ಸೂರ್ಯನ ಉಂಗುರ ಸೃಷ್ಟಿಯಾಗುತ್ತದೆ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.

