ವಿಜಯಪುರ ಜಿಲ್ಲೆಯಲ್ಲಿ ಲಸಿಕಾ ಅಭಿಯಾನಕ್ಕೆ ಸಕಲ ಸಿದ್ಧತೆ | ೨.೯೨ ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಜೂನ್ ೨೮ ರಿಂದ ಜುಲೈ ೧ರವರೆಗೆ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನಕ್ಕಾಗಿ ಅಗತ್ಯ ಸಿದ್ಧತೆ ಕೈಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ.ಕೆ ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಮುಖವಾಗಿ ೫ ವರ್ಷದೊಳಗಿನ ಒಟ್ಟು ೨,೯೨,೪೯೫ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಗ್ರಾಮೀಣ ಪ್ರದೇಶದ ೨,೨೧,೯೯೬ ಮಕ್ಕಳು ಹಾಗೂ ನಗರ ಪ್ರದೇಶದ ೭೦,೪೯೯ ಮಕ್ಕಳು ಸೇರಿದ್ದಾರೆ. ಜಿಲ್ಲೆಯ ಒಟ್ಟು ೪,೭೮,೨೮೩ ಮನೆಗಳಿಗೆ ಲಸಿಕಾ ಕಾರ್ಯಕರ್ತರು ಭೇಟಿ ನೀಡಲಿದ್ದು, ಲಸಿಕೆಯಿಂದ ಯಾವುದೇ ಮಗು ವಂಚಿತವಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ತಂಡಗಳ ಯಶಸ್ವಿ ಮೇಲ್ವಿಚಾರಣೆಗಾಗಿ ೨೮೦ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು,ಗರಿಷ್ಠ ಹೈ ರಿಸ್ಕ್ ಹೊಂದಿರುವ ೧,೦೧೦ ಹಾಗೂ ೧೧೫ ವಲಸೆ ಪ್ರದೇಶಗಳ ಮೇಲೆಯೂ ಆರೋಗ್ಯ ಇಲಾಖೆ ವಿಶೇಷ ನಿಗಾ ವಹಿಸಬೆಕು ಎಂದರು.
ತಾಲೂಕಾ ಟಿಎಚ್‌ಒ ಅವರು ಜವಾಬ್ದಾರಿ ತೆಗೆದುಕೊಂಡು ಅಭಿಯಾನ ಕಾರ್ಯಕ್ರಮಕ್ಕೆ ಯಶಸ್ಸಿಗೆ ಕಾರ್ಯ ನಿರ್ವಹಿಸಬೇಕು. ಲಸಿಕಾ ದಿನ ಅಂಗನವಾಡಿ ಕೇಂದ್ರವನ್ನು ತೆರೆದಿಡಬೇಕು. ಅಂಗನವಾಡಿ ಹಾಗೂ ಮೇಲ್ವಿಚಾರಕರು ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.
ವೈದ್ಯಕೀಯ ಮಹಾವಿದ್ಯಾಲಯ ನರ್ಸಿಂಗ್ ತಂಡದೊಂದಿಗೆ ಕಾರ್ಯಕ್ರಮದ ಮೊಬಲೈಜೇಶನ್ ಮಾಡುವಂತೆಯೂ,ಲಸಿಕಾ ಕಾರ್ಯಕ್ರಮ ನಡೆಯುವ ದಿವಸ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಗಾಗಿ ಕ್ರಮ ವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿಳಿಗೆ ಸೂಚಿಸಿದರು.
ಈ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಆಡಿಯೋ ಜಿಂಗಲ್ಸ್ಗಳನ್ನು ಸ್ವಚ್ಛತಾ ವಾಹನಗಳ ಮೂಲಕ ಪ್ರಚುರಪಡಿಸಿ ಹಾಗೂ ಕರಪತ್ರ ಮುದ್ರಿಸಿ, ಗ್ರಾಪಂ ವಾರ್ಡಗಳಲ್ಲಿ ಪ್ರಚುರಪಡಿಸಬೇಕು ಎಂದು ಸಭೆಯಲ್ಲಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ವಿಶೇಷ ಪ್ರಚಾರ ಸಾಮಗ್ರಿಯ ಪೋಸ್ಟರ್ ಗಳನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಬಿಡುಗಡೆಗೊಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತ್ ಗುಣಾರಿ, ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಡಾ.ಪರಸುರಾಮ ಹಿಟ್ನಳ್ಳಿ, ಡಾ.ಎಲ್.ಎಚ್.ಬಿದರಿ, ಮುಕುಂದ ಗಲಗಲಿ ಸೇರಿದಂತೆ ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲೆಯಾದ್ಯಂತ ಒಟ್ಟು ೧,೪೮೬ ಲಸಿಕಾ ಕೇಂದ್ರಗಳ ಸ್ಥಾಪನೆ
ಲಸಿಕಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಬಸವನಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ ಮತ್ತು ಸಿಂದಗಿ ತಾಲೂಕಾ ವ್ಯಾಪ್ತಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು ೧,೪೮೬ ಲಸಿಕಾ ಕೇಂದ್ರಗಳನ್ನು ಬೂತ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರೊಂದಿಗೆ ಪ್ರಮುಖ ನಿಲ್ದಾಣ ಹಾಗೂ ಜಂಕ್ಷನ್ ಗಳಿಗಾಗಿ ೪೧ ಟ್ರಾನ್ಸಿಟ್ ತಂಡಗಳು ಮತ್ತು ದೂರದ ಪ್ರದೇಶಗಳಿಗಾಗಿ ೩೧ ಮೊಬೈಲ್ ತಂಡಗಳು ಸೇರಿದಂತೆ ಒಟ್ಟು ೧,೫೫೮ ತಂಡಗಳು ನಿಯೋಜಿಸಲಾಗುವುದು.
ಬಾಕ್ಸ್

