ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಐತಿಹಾಸಿಕ ದೇವರಾದ ಶ್ರೀ ರಾವುತರಾಯನು ತನ್ನ ಅಲಂಕಾರ ಅಂಗವಾಗಿ ದಿ:೨೦ ರಂದು ಬಂಡಿ ಉತ್ಸವದೊಂದಿಗೆ ಮಲ್ಲಯ್ಯನ ದೇವಸ್ಥಾನ ಪ್ರವೇಶಿಸಲಿದ್ದಾನೆ.
ಪಟ್ಟಣದ ಸರ್ವಜನ ಪೂಜಿತ ರಾವುತರಾಯ ಬಹುದಿನಗಳ ನಂತರ ಅಲಂಕಾರಕ್ಕೆ ಸಿದ್ಧನಾಗಿದ್ದು ಇದನ್ನು ಗ್ರಾಮೀಣ ಭಾಷೆಯಲ್ಲಿ ಬಣ್ಣ ಕಾರ್ಯ ಎಂದೇ ಕರೆಯಲ್ಪಡುತ್ತಿದೆ. ಈ ಕಾರ್ಯದ ಅಂಗವಾಗಿ ದಿ: ೧೯ ರಂದು ಬಂಡಿ ತುಂಬುವದು ಹಾಗೂ ೨೦ ರಂದು ಬಂಡಿ ಉತ್ಸವ ಆರಂಭಗೊಳ್ಳಲಿದೆ.
ಶ್ರೀರಾವುತರಾಯ ಅಲಂಕಾರಕ್ಕೆ ೩ ರಿಂದ ೪ ತಿಂಗಳು ಕಾಲ ತಗುಲಲಿದೆ. ಇದನ್ನು ಗೋಕಾಕ ಪಟ್ಟಣದ ಚಿತಾರಿ ಕುಟುಂಬದವರು ನೆರವೇರಿಸುತ್ತಿದ್ದಾರೆ. ಈ ಸಮಯದಲ್ಲಿ ಮಲ್ಲಯ್ಯನ ದೇವಸ್ಥಾನದಲ್ಲಿಯೇ ಅಲಂಕಾರ ಪೂರ್ಣಗೊಳ್ಳುವವರೆಗೆ ಆಸೀನನಾಗಿದ್ದು, ಭಕ್ತರಿಗೆ ಯಾವುದೇ ರೀತಿಯಾದ ದರ್ಶನ ಭಾಗ್ಯ ಇರುವುದಿಲ್ಲ. ಭಕ್ತಾಧಿಗಳು ಅಲಂಕಾರ ಕಾರ್ಯದಲ್ಲಿ ತನು,ಮನ,ಧನದಿಂದ ಸೇವೆ ಸಲ್ಲಿಸಿ ಪುನೀತರಾಗಬೇಕೆಂದು ಶ್ರೀಮಲ್ಲಯ್ಯ ರಾವುತರಾಯ ದೇವಸ್ಥಾನ ಕಮಿಟಿ ಪ್ರಕಟಣೆ ಮೂಲಕ ತಿಳಿಸಿದೆ.

