ವಿಜಯಪುರದಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಪಂ ಸಿಇಒ ರಿಷಿ ಆನಂದ ಕಟ್ಟುನಿಟ್ಟಿನ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸೇರಿದಂತೆ ಸರಕಾರದ ವಿವಿಧ ಯೋಜನೆಯಡಿ ಅನೇಕ ಫಲಾನುಭವಿಗಳು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಈವರೆಗೂ ಅರ್ಜಿಗಳನ್ನು ಬ್ಯಾಂಕ್ ಗಳು ಬಾಕಿ ಉಳಿಸಿಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣಕ್ಕೆ ಫಲಾನುಭವಿಗಳ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ವತಿಯಿಂದ ತ್ರೈಮಾಸಿಕ ಡಿಸ್ಟ್ರಿಕ್ಟ್ ಕನ್ಸಲ್ಟೇಟಿವ್ ಕಮಿಟಿ ಸಭೆ ಹಾಗೂ ಡಿಸ್ಟ್ರಿಕ್ಟ್ ಲೆವೆಲ್ ರಿವಿವ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ವಾರದಲ್ಲಿ ಬಾಕಿ ಉಳಿದ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಸಂಪೂರ್ಣವಾಗಿ ವಿಲೇವಾರಿ ಮಾಡತಕ್ಕದ್ದು. ಒಂದು ವೇಳೆ ವಿಳಂಬವಾದಲ್ಲಿ ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯ ಪಜಾ, ಪಪಂ, ಅಲ್ಪ ಸಂಖ್ಯಾತರ ಹೀಗೆ ಅನೇಕ ದುರ್ಬಲ ವರ್ಗಗಳ ಗ್ರಾಹಕರು ಸೇರದಂತೆ ಸಾಲ ಸೌಲಭ್ಯ ಕೋರಿ, ಬ್ಯಾಂಕ್ ಗಳಿಗೆ ಬಂದಾಗ ಸರಿಯಾಗಿ ಸ್ಪಂದಿಸಬೇಕು. ಅವರೊಂದಿಗೆ ಸಹಾನುಭೂತಿ ಹಾಗೂ ಸಕಾರಾತ್ಮಕ ಮನೋಭಾವದಿಂದ ವರ್ತಿಸಬೇಕು ಎಂದರು. ಆರ್.ಬಿ.ಐ ಮಾರ್ಗಸೂಚಿ ಪ್ರಕಾರ ಬ್ಯಾಂಕ್ ಯೋಜನೆಗಳ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು. ಜೊತೆಗೆ ಸೌಲಭ್ಯಗಳ ಕುರಿತು ಮಾಡಬೇಕು. ಸಾಲ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದು ಸಿಇಒ ಬ್ಯಾಂಕ್ ವ್ಯವಸ್ಥಾಪಕರಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಿದರು.
ಬಳಿಕ ಜಿಪಂ ಸಿಇಒ ರಿಷಿ ಆನಂದ ಅವರು, ೨೦೨೬-೨೭ನೇ ಸಾಲಿನ ಸಂಭಾವ್ಯ ಸಾಲ ಯೋಜನೆಯ ಸಂಭಾವ್ಯ ಲಿಂಕ್ಡ್ ಯೋಜನೆಯ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ವಿಕಾಸ ರಾಠೋಡ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಬಿ. ಸಿದ್ದಯ್ಯ, ಆರ್.ಬಿ.ಐ ವ್ಯವಸ್ಥಾಪಕ ಶೀಲ್ ಪ್ರಿಯಾ ಗೌತಮ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

