ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ದೈವಿ ಪುರುಷ ಲಿಂಗೈಕ್ಯ ಶ್ರೀ ವಿರಕ್ತಮಹಾಸ್ವಾಮಿಗಳ ೩೩ ನೇ ಪುಣ್ಯ ಸ್ಮರಣೋತ್ಸವ ಹಾಗೂ ಶಿವಶರಣೆ ಅಕ್ಕಮಹಾದೇವಿ ಜಯಂತೋತ್ಸವ ಕಾರ್ಯಕ್ರಮವನ್ನು ಅಧ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಸ್ಥಳಿಯ ವಿರಕ್ತಮಠದ ಚನ್ನಬಸವೇಶ್ವರ ಸಭಾ ವೇದಿಕೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯ ನಂತರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿರಕ್ತಶ್ರೀಗಳ ಪುಣ್ಯ ಸ್ಮರಣೋತ್ಸವದ ನಿಮಿತ್ತ ಕಲಬುರ್ಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮ ಮಾ. ೧೯ ರಿಂದ ಎ.೧ ರ ವರೆಗೆ ನಡೆಯಲಿದ್ದು, ಗಂಗಾವತಿ ಹಿರೇಮಠ ಮದ್ಲಾಪುರದ ಪಂ. ರುದ್ರಯ್ಯ ಸ್ವಾಮಿಗಳು ನಡೆಸಿ ಕೊಡಲಿದ್ದಾರೆ, ಅಲ್ಲದೇ ಮಾ. ೨೭ರಿಂದ ಎಪ್ರಿಲ್ ೨ರವರೆಗೆ ನಿರಂತರ ವಿಶೇಷ ಕಾರ್ಯಕ್ರಮಗಳು ಹಾಗೂ ನಿರಂತರ ಅನ್ನಪ್ರಸಾದವಿತರಣೆ ನಡೆಸಲು ತೀರ್ಮಾನಿಸಲಾಗಿದ್ದು ನಾಡಿನ ಪ್ರಮಖ ಶ್ರೀಗಳು, ಸಮಾಜ ಸೇವಕರು, ಧುರೀಣರು, ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಸಾರ್ವಜನಿಕರು ತನು, ಮನ, ಧನದೊಂದಿಗೆ ಭಕ್ತಿಪೂರ್ವಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದರು,
ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪ ನೇಸೂರ ಮಾತನಾಡಿ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ಕೊಡಮಾಡುವ ಈ ಸಾಲಿನ “ಅಕ್ಕ’ ರಾಜ್ಯಮಟ್ಟದ ಪ್ರಶಸ್ತಿಯನ್ನು ಕೇಂದ್ರ ಮಾಜಿ ಸಚಿವ ದಿ. ಅನಂತಕುಮಾರ ಧರ್ಮಪತ್ನಿ ಅದಮ್ಯಚೇತನ ಫೌಂಡೆಶನ್ ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತಕುಮಾರ ರವರಿಗೆ ನೀಡಲಾಗುತಿದ್ದು ಶ್ರೀಮಠದ ಭಕ್ತರೆಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಆರ್.ಎಂ. ಬಗನಾಳ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪ ಹಳಿಂಗಳಿ, ಬಿ.ಎಸ್. ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಬೀರಪ್ಪ ಹಳೇಮನಿ, ರಾಚಯ್ಯ ಮಠಪತಿ ಚಂದ್ರಕಾಂತ ಜಾಡಗೌಡರ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

