ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕೇಂದ್ರ ಚುನಾವಣಾ ಆಯೋಗವು ಬಾಗಲಕೋಟೆ ವಿಧಾನ ಸಭಾ ಸಾಮಾನ್ಯ ಕ್ಷೇತ್ರದ ಉಪ ಚುನಾವಣೆಯನ್ನು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಏಪ್ರಿಲ್ 9ರಂದು ಮತದಾನ ನಡೆಯಲಿರುವುದರಿಂದ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಜ್ಯೋತಿಗಿರೀಶ ಹೇಳಿದರು.
ನಗರ ವ್ಯಾಪ್ತಿಯಲ್ಲಿ ರಾಜಕೀಯ ಮುಖಂಡರು ಹಾಗೂ ಇತರ ಗಣ್ಯರ ಹೆಸರಿನಲ್ಲಿ ಅಳವಡಿಸಲಾದ ಬ್ಯಾನರ್, ಪ್ಲೆಕ್ಸ್ ಮತ್ತು ಬಂಟಿಂಗ್ಸ್ ಇದ್ದರೆ ಸಂಬಂಧಿಸಿದ ಪಕ್ಷದವರು ತಕ್ಷಣವೇ ತೆರವುಗೊಳಿಸಿಕೊಳ್ಳಬೇಕು ಎಂದು ಸೂಚಿಸಿದರು. ಈಗಾಗಲೇ ನಮ್ಮ ಸಿಬ್ಬಂದಿ ನಗರದಲ್ಲಿರುವ ಬ್ಯಾನರ್ ಹಾಗೂ ಪ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ಉಪಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ರಾಜಕೀಯ ವ್ಯಕ್ತಿಗಳು ಅಥವಾ ಗಣ್ಯರ ಹೆಸರಿನಲ್ಲಿ ಪ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಶಾಲಾ ಕಾರ್ಯಕ್ರಮಗಳು ಅಥವಾ ಇತರ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಗಣ್ಯರ ಫೋಟೋಗಳನ್ನು ಹೊರತುಪಡಿಸಿ, ನಗರ ಸಭೆಯ ಅನುಮತಿ ಪಡೆದು ಮಾತ್ರ ಬ್ಯಾನರ್ ಅಳವಡಿಸಬೇಕು. ಯಾವುದೇ ಕಾರ್ಯಕ್ರಮ ನಡೆಸುವ ಮೊದಲು ನಗರ ಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸೂಚನೆ ನೀಡಿದರು.

