ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಮುರುಗೇಶ್ ನಿರಾಣಿ ಯಿಂದ ಸರ್ಕಾರದ ಮುಂದೆ ಪ್ರಸ್ತಾವನೆ
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ಜಾಗತಿಕ ಯುದ್ಧದ ಪರಿಣಾಮವಾಗಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ಉಂಟಾಗಿರುವ ಅಭಾವವನ್ನು ಸಮರ್ಥವಾಗಿ ಎದುರಿಸಲು, ಸ್ವದೇಶಿ ತಂತ್ರಜ್ಞಾನದ ‘ಎಥೆನಾಲ್ ಸ್ಟೌವ್’ ಬಳಕೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಎಂ.ಆರ್.ಎನ್ ಉದ್ಯಮ ಸಮೂಹದ ಸಂಸ್ಥಾಪಕರು ಹಾಗೂ ಮಾಜಿ ಸಚಿವರು ಮತ್ತು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾದ ಡಾ. ಮುರುಗೇಶ್ ಆರ್ ನಿರಾಣಿ ಅವರು ಮಹತ್ವದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಎಥೆನಾಲ್ ಸ್ಟೌವ್‌ಗಳು ಹೊಸ ಆವಿಷ್ಕಾರವಲ್ಲ, ಇವುಗಳನ್ನು 2004ರಲ್ಲೇ ಅಭಿವೃದ್ಧಿಪಡಿಸಲಾಗಿದ್ದು, ಸೀಮೆಎಣ್ಣೆ ಒಲೆಗಳ ಮಾದರಿಯಲ್ಲೇ ಅತ್ಯಂತ ಸರಳ ಹಾಗೂ ಜನಸ್ನೇಹಿ ವಿನ್ಯಾಸವನ್ನು ಹೊಂದಿವೆ. ಈಗಾಗಲೇ ದೇಶದ ವಿವಿಧೆಡೆ ಸುಮಾರು 24 ಲಕ್ಷಕ್ಕೂ ಅಧಿಕ ಕುಟುಂಬಗಳು ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಇದರ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ.

ವೆಚ್ಚದ ದೃಷ್ಟಿಯಿಂದ ಎಲ್‌ಪಿಜಿಗೆ ಹೋಲಿಸಿದರೆ ಎಥೆನಾಲ್ ತುಸು ದುಬಾರಿ ಎನಿಸಿದರೂ, ಇದು ಸಂಪೂರ್ಣವಾಗಿ ಪರಿಸರ ಸ್ನೇಹಿ ಇಂಧನವಾಗಿದೆ. ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದ ಈ ಸುರಕ್ಷಿತ ವಿಧಾನವು ಭವಿಷ್ಯದ ಸುಸ್ಥಿರ ಇಂಧನ ಬಳಕೆಗೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಅವರು ವಿವರಿಸಿದ್ದಾರೆ.
ಎಥೆನಾಲ್ ತಯಾರಿಕೆಗೆ ಕಬ್ಬು, ಮೆಕ್ಕೆಜೋಳ, ಕಳಪೆ ಗುಣಮಟ್ಟದ ಅಕ್ಕಿ, ಹುಲ್ಲು ಹಾಗೂ ಸಿಹಿ ಜೋಳದಂತಹ ಕೃಷಿ ಉತ್ಪನ್ನಗಳು ಮತ್ತು ತ್ಯಾಜ್ಯಗಳನ್ನು ಬಳಸಬಹುದಾಗಿದೆ. ಗೃಹಬಳಕೆಯ ಇಂಧನವಾಗಿ ಎಥೆನಾಲ್ ಮನ್ನಣೆ ಪಡೆದರೆ, ಕೃಷಿ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಲಭ್ಯವಾಗಿ ರೈತರ ಆದಾಯ ದುಪ್ಪಟ್ಟಾಗಲಿದೆ. ಇದು ಪ್ರಧಾನಮಂತ್ರಿಯವರ ‘ಆತ್ಮನಿರ್ಭರ ಭಾರತ’ ಸಂಕಲ್ಪಕ್ಕೆ ನೈಜ ಶಕ್ತಿ ತುಂಬಲಿದೆ.
ದೇಶದಲ್ಲಿ ಪ್ರಸ್ತುತ ಎಥೆನಾಲ್ ಉತ್ಪಾದನೆಯು ಹೇರಳವಾಗಿದೆ. ಈ ಸಂಪನ್ಮೂಲವನ್ನು ಸಮರ್ಪಕವಾಗಿ ವಿನಿಯೋಗಿಸಲು ಸರ್ಕಾರವು ಮೊದಲ ಹಂತದಲ್ಲಿ ಹೋಟೆಲ್, ವಸತಿ ನಿಲಯ ಹಾಗೂ ಲಾಡ್ಜ್‌ಗಳಲ್ಲಿ ಎಥೆನಾಲ್ ಸ್ಟೌವ್ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ಜನಸಾಮಾನ್ಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ವಿಶ್ವದ ಅನೇಕ ಮುಂದುವರಿದ ರಾಷ್ಟ್ರಗಳು ಈಗಾಗಲೇ ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಭಾರತದಲ್ಲೂ ಈ ಕ್ರಾಂತಿಕಾರಿ ಚಿಂತನೆ ಶೀಘ್ರವಾಗಿ ಸಾಕಾರಗೊಳ್ಳಬೇಕು ಎಂದು ಡಾ.ಮುರುಗೇಶ್ ಆರ್ ನಿರಾಣಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.

