ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಾ.18ರಿಂದ ಆರಂಭಗೊಳ್ಳುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಯಾವುದೇ ಲೋಪ ದೋಷ ವಾಗದಂತೆ ಪಾರದರ್ಶಕ, ವ್ಯವಸ್ಥಿತವಾಗಿ ಆಯೋಜಿಸಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು ಎಂದು ತಹಶಿಲ್ದಾರ ಸಂಜಯ ಇಂಗಳೆ ಹೇಳಿದರು.
ಪಟ್ಟಣದ ಎಂ.ಎ.ಎಸ್ ಪಬ್ಲಿಕ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ತಾಲ್ಲೂಕು ಮಟ್ಟದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಬಿಇಒ ಚಿದಾನಂದ ಕಟ್ಟಿಮನಿ ಮಾತನಾಡಿ,ಚಡಚಣ ತಾಲ್ಲೂಕಿನಲ್ಲಿ 49 ಪ್ರೌಢಶಾಲೆಗಳಿದ್ದು,11 ಪರೀಕ್ಷಾ ಕೇಂದ್ರಗಳಲ್ಲಿ 3980 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು ಎರಡು ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪರೀಕ್ಷೆಗಳು ಸುಸುತ್ರವಾಗಿ ನಡೆಯಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ ಟಿವಿ ಕಡ್ಡಯಗೋಳಿಸಲಾಗಿದೆ.ನಿರಂತರ ವಿದ್ಯುತ್ ಪೂರೈಕೆ, ಗರಿಷ್ಟ ಭದ್ರತಾ ವ್ಯವಸ್ಥೆಗೆ ಕ್ರಮ ಕೈಗೊಂಡು, ಸ್ಥಾನಿಕ ಹಾಗೂ ಸಂಚಾರಿ ಸ್ಕ್ವಾಡಗಳ ತಂಡ ರಚಿಸಲಾಗಿದೆ ಎಂದರು.
ಹೆಸ್ಕಾಂನ ಕಾರ್ಯ ನಿರ್ವಾಹಕ ಇಂಜನೀಯರ್ ವಿಜಯಕುಮಾರ ಹವಾಲ್ದಾರ ಮಾತನಾಡಿ, ಪರೀಕ್ಷಾ ದಿನಗಳಂದು ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಪಿಎಸ್ಐ ಸೋಮೇಶ ಗೆಜ್ಜಿ ಮಾತನಾಡಿ, ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5, ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಹಾಗೂ ಹೋರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಮೇಲಾಧಿಕಾರಿಗಳ ಗಮನಕ್ಕೆತರಲಾಗುವದು ಎಂದರು.
ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ ಮಾತನಾಡಿ, ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲ ಹಂತದ ಸಿಬ್ಬಂದಿ ಪರೀಕ್ಷಾ ಮಂಡಳಿಯ ಮಾರ್ಗಸೂಚಿ ಪಾಲಿಸುವದು ಕಡ್ಡಾಯವಾಗಿದೆ ಎಂದರು.
ಪರೀಕ್ಷಾ ನೋಡಲ್ ಅಧಿಕಾರಿ ಎನ್.ಜೆ ಸಿನಖೇಡ ಮಾತನಾಡಿ, ಪರೀಕ್ಷಾ ಮಂಡಳಿಯ ಮಾರ್ಗಸೂಚಿ ಹಾಗೂ ರೂಪರೇಷೆಗಳನ್ನು ತಿಳಿಸಿದರು.
ಸಭೆಯಲ್ಲಿ ಬಿ.ಆರ್.ಸಿ ಬಿ.ಜೆ.ನಾಡಗೇರ, ಎಂ.ಇ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಚೋಳಕೆ, ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿದ ಎಲ್ಲ ಹಂತದ ಅಧಿಕಾರಿಗಳು,ಸಿಬ್ಬಂದಿ ಇದ್ದರು.

