ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಜನರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ವಿಷಮುಕ್ತ ಆಹಾರ ಸೇವನೆಯತ್ತ ವಾಲಿದ್ದಾರೆ. ಹೀಗಾಗಿ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಕಬ್ಬು ಬೆಳೆಗಾರರು ಕೂಡ ವಿಷಮುಕ್ತ ಬೆಲ್ಲ ತಯಾರಿಕೆಗೆ ಆದ್ಯತೆ ನೀಡಲಿ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಸಲಹೆ ನೀಡಿದರು.
ತಾವು ಪ್ರತಿನಿಧಿಸುವ ಬಸವನಬಾಗೇವಾಡಿ ಕ್ಷೇತ್ರದ ಮನಗೂಳಿಯ ಸಾವಯವ ಕೃಷಿಕರಾದ ಅಶ್ವಿನಿ ಚಂದ್ರಶೇಖರ ರೆಡ್ಡಿ ಅವರು ಪುಣ್ಯಕೋಟಿ ಫಾರ್ಮನಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಕಬ್ಬು ಬಳಸಿ ತಯಾರಿಸಿದ ಬಕೇಟ್ ಬೆಲ್ಲ , ಬೆಲ್ಲದ ಅಚ್ಚು, ಬೆಲ್ಲದ ಪಾಕ ಹಾಗೂ ಬೆಲ್ಲದ ಪುಡಿ ಉತ್ಪನ್ನಗಳನ್ನು ಸೋಮವಾರ ಬಿಡುಗಡೆಮಾಡಿ ಮಾತನಾಡಿದ ಸಚಿವರು, ನನ್ನ ಕ್ಷೇತ್ರದಲ್ಲಿ ಕಬ್ಬು ಬೆಳೆಯುವ ರೈತರಲ್ಲಿ ಬಹುತೇಕರು ಪ್ರಗತಿಪರರು, ಸಾವಯವ ಪದ್ಧತಿ ಅನುಸರಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಆಶಾದಾಯಕ ಹಾಗೂ ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ ಎಂದರು.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಮನಗೂಳಿಯ ರಿಷಬ್ ಫಾರ್ಮನಲ್ಲಿ ಸಾವಯವ ಬೆಲ್ಲ ತಯಾರಿಕೆ ಘಟಕಕ್ಕೆ ನಾನೇ ಚಾಲನೆ ನೀಡಿದ್ದೆ. ಇದೀಗ ಅದೇ ಘಟಕದಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಸಂತಸವಾಗುತ್ತಿದೆ ಎಂದರು.
ಕೃಷಿ ವಲಯ ಅತಿ ಹೆಚ್ಚು ಉದ್ಯೋಗ ಕೊಡುವ ಕ್ಷೇತ್ರವಾಗಿದ್ದು, ಮಾರುಕಟ್ಟೆಗೆ ತಕ್ಕಂತೆ ಕೃಷಿ ಉತ್ಪನ್ನಗಳನ್ನು ಬೆಳೆದಲ್ಲಿ ರೈತರು ಹೆಚ್ಚಿನ ಆದಾಯ, ಆರ್ಥಿಕ ಲಾಭ ಪಡೆಯಲು ಸಾಧ್ಯವಿದೆ. ಇದರಿಂದ ಯುವ ಸಮೂಹ ಕೃಷಿಯೊಂದ ವಿಮುಖವಾಗುವುದನ್ನು ತಡೆಯಲು ಸಾಧ್ಯವಿದೆ. ಕಾರಣ ರೈತರು ತಾಂತ್ರಿಕ ಜ್ಞಾನದೊಂದಿದೆ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಕಿವಿ ಮಾತು ಹೇಳಿದರು.
ಚಂದ್ರಶೇಖರ ರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

