ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಿ ಈ ಭಾಗದ ಕೆರೆಗಳ ಭರ್ತಿಗೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಆಸಕ್ತಿ ವಹಿಸಿ ಕೂಡಲೇ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ರೈತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಂಗಳವಾರ ಪತ್ರಿಕೆಯೊಂದಿಗೆ ನಿವಾಳಖೇಡ ಗ್ರಾಮದ ರೈತ ಚನ್ನಪ್ಪ ಕಾರಜೋಳ ಹಾಗೂ ಬಸವರಾಜ ಕಲ್ಲೂರ(ಮುಳಸಾವಳಗಿ) ಮಾತನಾಡಿ, ತಾಲ್ಲೂಕಿನಲ್ಲಿ ಹರಿಯುವ ಮುಳವಾಡ ಏತ ನೀರಾವರಿ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದರೆ ತಾಲ್ಲೂಕಿನ ಗಂಗನಳ್ಳಿ ಗ್ರಾಮದವರೆಗೆ ನೀರು ಸಂಪರ್ಕಿಸುವ ನಾಗಠಾಣ ಉಪಕಾಲುವೆೆ ನೀರು ಹರಿಯದೇ ಭಣಗುಡುತ್ತಿದೆ. ಈ ಕಾಲುವೆಯ ನೀರಿನ ಮೇಲೆ ಅವಲಂಬಿತವಾದ ಕೃಷಿಕರು ವ್ಯವಸ್ಥೆಯ ತಾರತಮ್ಯ ನೀತಿಯಿಂದ ನೀರಿಗಾಗಿ ಪರಿತಪ್ಪಿಸುವಂತಾಗಿದೆ.
ಚಿಮ್ಮಲಗಿ ಏತ ನೀರಾವರಿಯ ನಾಗಠಾಣ ಉಪಕಾಲುವೆಯಲ್ಲಿ ಸುಮಾರು ೧೪೬ ಕಿ.ಮೀ ನೀರು ಹರಿಯಬೇಕು. ಆದರೆ ಕಾಲುವೆ ಹಾದು ಬರುವ ಹಂತಗಳಲ್ಲಿ ಕೆಲವು ರೈತರು ಕಲ್ಲು, ಗರಸು ಹಾಕಿ ನೀರು ನಿಲುಗಡೆ ಮಾಡಿದ ಉದಾಹರಣೆಗಳಿವೆ. ಜೊತೆಗೆ ಮೋಟಾರ್‌ಗಳ ಮೂಲಕ ಸತತ ನೀರು ಪಡೆಯುವುದರಿಂದ ಕೊನೆಯ ಹಂತದವರೆಗೆ ನೀರು ತಲುಪುತ್ತಿಲ್ಲ. ಪ್ರತಿ ವರ್ಷ ಈ ಕುರಿತು ಮಾಧ್ಯಮಗಳ ಮೂಲಕ ಗಮನ ಸೆಳೆದರೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಲುವೆಗಳಿಗೆ ನೀರು ಬಂದರೆ ಕೆರೆ ಹಳ್ಳಗಳು, ಕೊಳವೆಭಾವಿ, ಭಾವಿಗಳು ಭರ್ತಿಯಾಗಿ ರೈತರಿಗೆ ಅನುಕೂಲವಾಗಲಿದೆ. ಕಾಲುವೆಗಳಿಗೆ ನೀರು ಬಂದರೂ ಕೊನೆಯವರೆಗೆ ತಲುಪದೇ ಇರುವುದು ರೈತರಿಗೆ ತೊಂದರೆಯಾಗಿದೆ. ಇದರಿಂದ ರೈತರು ಗೂಳೆ ಹೋಗುವಂತಾಗಿದೆ. ತಕ್ಷಣವೇ ದೇವರಹಿಪ್ಪರಗಿ-ಗಂಗನಳ್ಳಿ ನಡುವಿನ ಕಾಲುವೆಗೆ ನೀರು ಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಲಲಿತಾಬಾಯಿ ದಳವಾಯಿ, ಶಿವನಗೌಡ ಪಾಟೀಲ, ರಮೇಶ ಕಲ್ಲೂರ, ಲಕ್ಷ್ಮೀಕಾಂತ ಇಂಡಿ, ಬಸವರಾಜ ಕೋಣ್ಣೂರ, ಈರಣ್ಣ ದೇಸಾಯಿ, ಸಿದ್ದು ಕಾರಜೋಳ, ಅನೀಲ ಮಸೂತಿ, ಶಿವಶರಣ ಮುಳಸಾವಳಗಿ, ಬಸವರಾಜ ಬೊಮ್ಮನಳ್ಳಿ(ಮುಳಸಾವಳಗಿ) ಯಮನೂರಪ್ಪ ಸಾತಿಹಾಳ(ಇಂಗಳಗಿ), ಸಾಹೇಬಗೌಡರೆಡ್ಡಿ(ಕಡ್ಲೇವಾಡ ಪಿಸಿಎಚ್) ಶ್ರೀಮಂತ ತಳವಾರ (ನಿವಾಳಖೇಡ), ಸೇರಿದಂತೆ ವಿವಿಧ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.

