ನಾರಾಯಣಪುರ ಜಲಾಶಯಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸದಿದ್ದರೆ ಜಲಾಶಯಕ್ಕೆ ಇಳಿದು ಪ್ರತಿಭಟನೆ ಎಚ್ಚರಿಕೆ
ನಾರಾಯಣಪುರ ಜಲಾಶಯಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸದಿದ್ದರೆ ಜಲಾಶಯಕ್ಕೆ ಇಳಿದು ಪ್ರತಿಭಟನೆ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಲಮಟ್ಟಿ ಲಾಲಬಹುದ್ದೂರ ಶಾಸ್ತ್ರಿ ಜಲಾಶಯದಿಂದ ಕೆಪಿಸಿಎಲ್ ಮೂಲಕ ನಾರಾಯಣಪುರ ಜಲಾಶಯಕ್ಕೆ ರಾತ್ರೋ ರಾತ್ರಿ ಪ್ರತಿ ನಿತ್ಯ ೪೫೦೦೦ ಕ್ಯೂಸೆಕ್ ವರೆಗೆ ನೀರು ಹರಿಸಲಾಗುತ್ತಿದ್ದು ಮುಂದೆ ನಾರಾಯಣಪುರ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ನೀರು ಕೊಡುವ ಹುನ್ನಾರ ರಾಜ್ಯ ಸರ್ಕಾರ ನಡೆಸುತ್ತಿದೆ ಕೂಡಲೇ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು, ಇಲ್ಲದಿದ್ದರೆ ಆಲಮಟ್ಟಿ ಜಲಾಶಯಕ್ಕೆ ಇಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಭಾರತೀಯ ಕಿಸಾನ ಸಂಘದ ರಾಜ್ಯ ಉಪಾಧ್ಯಕ್ಷರಾದ ಗುರುನಾಥ ಬಗಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದೇ ತಿಂಗಳು ೧೯ರಿಂದ ಗುರುವಾರದವರೆಗೂ ನಿರಂತರ ನೀರು ಹರಿಸುತ್ತಿದ್ದು ಒಟ್ಟು ೭ ಟಿಎಂಸಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿ ಬಿಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಗುರುವಾರದಂದು ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಾದ ಆನಂದ ಕೆ. ಅವರ ಮೂಲಕ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಕುಲಕರ್ಣಿ ಅವರು, ನಾರಾಯಣಪುರ ಜಲಾಶಯಕ್ಕೆ ಹಂತ ಹಂತವಾಗಿ ಬಿಡುವ ಬದಲು ಏಕಾ ಏಕಿ ಹೆಚ್ಚಿನ ಪ್ರಮಾಣ ನೀರು ಹರಿಸುತ್ತಿರುವುದರ ಹಿಂದೆ ತೆಲಂಗಾಣ ರಾಜ್ಯಕ್ಕೆ ನೀರು ಹರಿಸುವ ಉದ್ದೇಶವಿದೆ. ಹಬ್ಬದ ವಾತಾವರಣದಲ್ಲಿ ರೈತರು ಗಮನ ನೀರಿನ ಕಡೆ ಇರುವುದಿಲ್ಲ. ಹಬ್ಬದ ಸಂಭ್ರಮದಲ್ಲಿ ತೊಡಗಿರುತ್ತಾರೆ ಇದೇ ನಮಗೆ ಸೂಕ್ತ ಸಮಯವೆಂದು ರಾತ್ರಿ ವೇಳೆ ನೀರು ಹರಿಸಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂಬ ಕುತಂತ್ರ ಬುದ್ಧಿಯಿಂದ ರಾಜ್ಯ ಸರ್ಕಾರ ನೀರು ಹರಿಸುತ್ತಿದೆ. ಕೇವಲ ಮೂರ್ನಾಲ್ಕು ದಿನಗಳಲ್ಲಿ ೭ ಟಿಎಂಸಿ ನೀರು ಹರಿದು ಹೋಗಿದೆ. ಎರಡು ಮೂರು ದಿನಗಳವರೆಗೆ ನೀರು ಹರಿಸಿದರೆ ಸುಮಾರು ೧೨ ಟಿಎಂಸಿ ಅಡಿಯವರೆಗೆ ನೀರು ಹರಿದು ಹೋಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ನೀರು ಹರಿಸುವುದನ್ನು ಈಗಲೇ ನಿಲ್ಲಿಸಬೇಕು ಇಲ್ಲದಿದ್ದರೆ ಆಲಮಟ್ಟಿ ಜಲಾಶಯದಲ್ಲಿ ಇಳಿದು ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅರವಿಂದ ಕುಲಕರ್ಣಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಹಣಮಂತ್ರಾಯ ಹಂದ್ರಾಳ, ಚಂದ್ರಾಮ ತೆಗ್ಗಿ, ಗೌಡಪ್ಪ ಬಿರಾದಾರ, ರಾಯಪ್ಪಗೌಡ ಪುಲೇಶಿ, ನಾಗರಾಜ ವಂದಾಲ, ರಾಯಪ್ಪ ಸಂಕನಾಳ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಬಟಗಿ, ರಾಜು ವಂದಾಲ, ಸಂತೋಷ ಬಿರಾದಾರ, ಶ್ರೀಶೈಲ ಸಾಸನೂರ, ಮುತ್ತಣ್ಣ ಇಟಗಿ, ಶಿವಾನಂದ ಬಿರಾದಾರ, ಬನ್ನೆಪ್ಪ ಜೋಗಿ, ನಿಂಗಪ್ಪ ಕೋರವಾರ, ಮಲ್ಲನಗೌಡ ಪಾಟೀಲ ಡೋಮನಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

