ಟೇಲ್ಎಂಡ್ವರೆಗೆ ಸಮಾನವಾಗಿ ನೀರು ತಲುಪಿಸಲು ವಿವಿಧ ಇಲಾಖೆಗಳ ಜಂಟಿ ಕ್ರಮ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕೆನಾಲ್ನ ಕೊನೆಯ ಭಾಗವಾದ 172ನೇ ವಿತರಣಾ ಪ್ರದೇಶದವರೆಗೆ ನೀರು ತಲುಪುತ್ತಿಲ್ಲ ಎಂದು ರೈತರು ಹಲವು ಬಾರಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ, ರೈತರ ಹಿತದೃಷ್ಟಿಯಿಂದ ಝಳಕಿ ಠಾಣಾಧಿಕಾರಿ ಮಂಜುನಾಥ ತೀರಕನ್ನವರ ನೇತೃತ್ವದಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಲಾಯಿತು.
ಏಳಗಿ ಕೆನಾಲ್ನಿಂದ ಹತ್ತಳ್ಳಿ ಗ್ರಾಮದ 172ನೇ ಟೇಲ್ಎಂಡ್ವರೆಗೆ ನೀರು ಹರಿಯುತ್ತಿಲ್ಲ. ಇದರಿಂದ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ರೈತರು ಕೆ.ಬಿ.ಜೆ.ಎನ್.ಎಲ್. ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಕೆನಾಲ್ನುದ್ದಕ್ಕೂ ಪರಿಶೀಲನೆ ನಡೆಸಿ, ಅನಗತ್ಯವಾಗಿ ನೀರು ಬಳಕೆ ಮಾಡುತ್ತಿದ್ದ ಮೋಟರ್ಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಝಳಕಿ ಠಾಣಾಧಿಕಾರಿ ಮಂಜುನಾಥ ತೀರಕನ್ನವರ, “ಕೆನಾಲ್ನ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪಬೇಕು ಎಂಬುದು ನಮ್ಮ ಉದ್ದೇಶ. ಏಳಗಿ ಕೆನಾಲ್ನಿಂದ 172ನೇ ಟೇಲ್ಎಂಡ್ವರೆಗೆ ಪರಿಶೀಲನೆ ನಡೆಸಿ, ಅನಗತ್ಯವಾಗಿ ನೀರು ಬಳಸುತ್ತಿದ್ದ ಮೋಟರ್ಗಳನ್ನು ಬಂದ್ ಮಾಡಿಸಲಾಗಿದೆ. ಎಲ್ಲ ರೈತರಿಗೂ ಸಮಾನವಾಗಿ ನೀರು ಸಿಗಬೇಕು, ಎಲ್ಲರೂ ನೆಮ್ಮದಿಯಿಂದ ಇರಬೇಕು ಎಂಬ ರೈತರ ಹಿತದೃಷ್ಟಿಯಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದನ್ನು ಯಾರೂ ಅನ್ಯಥಾ ಭಾವಿಸಬಾರದು” ಎಂದು ತಿಳಿಸಿದರು.
ರೈತರು, ಜಾನುವಾರುಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ನೀರು ವ್ಯರ್ಥವಾಗದಂತೆ ಸಮರ್ಪಕವಾಗಿ ಬಳಕೆ ಮಾಡುವ ಕುರಿತು ಅಧಿಕಾರಿಗಳು ಸೂಚನೆ ನೀಡಿದರು. ಚಡಚಣ ತಾಲೂಕು ತಹಶೀಲ್ದಾರ್ ಸಂಜಯ ಇಂಗಳೆ, ಕೆ.ಬಿ.ಜೆ.ಎನ್.ಎಲ್. ಇಲಾಖೆ, ಕಂದಾಯ ಇಲಾಖೆ, ಝಳಕಿ ಪೊಲೀಸ್ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರ ಸಹಕಾರದೊಂದಿಗೆ ಈ ಜಂಟಿ ಕಾರ್ಯಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಕೆ.ಬಿ.ಜೆ.ಎನ್.ಎಲ್. ಇಲಾಖೆಯ ಅಧಿಕಾರಿ ಅಂಗಡಿ, ಶ್ರೀಮಂತ ಚಂದ್ರಕಾಂತ ಕೋಳಿ, ವಿದ್ಯುತ್ ಇಲಾಖೆಯ ಅಧಿಕಾರಿ ವಿಜಯಕುಮಾರ ಹವಾಲ್ದಾರ್, ಏಳಗಿ ಗ್ರಾಮದ ರೈತರಾದ ಪ್ರವೀಣ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.

