ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ದೇವರ ನಿಂಬರಗಿ ಗ್ರಾಮದ ದಲಿತ ವ್ಯಕ್ತಿಯ ಮೇಲೆ ಮಾರ್ಚ್ 11 ಸಾರ್ವಜನಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಚಡಚಣ ಪೊಲೀಸ್ ಠಾಣೆಯ ಎಲ್.ಎಸ್. ರಾಠೋಡ (ಎ.ಎಸ್.ಐ)ಅವರನ್ನು ಅಮಾನತುಗೊಳಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಚಡಚಣ ಉಪ ತಹಶೀಲದಾರ ಹುಸನಪ್ಪ ಹೊಸಮನಿ ಹಾಗೂ ಪಿ.ಎಸ್.ಐ. ಸೋಮೇಶ ಗೆಜ್ಜಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ದಶರಥ ಬನಸೋಡೆ ಮಾತನಾಡಿ, ಆರೋಪಿತ ಅಧಿಕಾರಿ ಕಾನೂನಿನ ಅರಿವು ಇರುವವರು ಹಾಗೂ ಕಾನೂನು ಪಾಲಿಸುವವರಾಗಿದ್ದಾರೆ. ಅವರೇ ಕಾನೂನುಗಳನ್ನು ಗಾಳಿಗೆ ತೂರಿ ಅಮಾಯಕ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇವರ ಮೇಲೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡ ಪರಮೇಶ್ವರ ಸಿಂಗೆ ಮಾತನಾಡಿ, ಇಂತಹ ಘಟನೆಗಳು ಸಮಾಜದಲ್ಲಿ ಅಸಮಾಧಾನ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಅಭಿಪ್ರಾಯಪಟ್ಟ ಅವರು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂಧರ್ಭದಲ್ಲಿ ದಲಿತ ಮುಖಂಡರಾದ ದಶರಥ ಬನಸೊಡೆ, ಧರ್ಮಣ್ಣ ಬನಸೊಡೆ ಹಾಗೂ ನಾರಾಯಣ ವಾಘಮೋರೆ, ಪರಮೇಶ್ವರ ಸಿಂಗೆ, ಪ್ರಕಾಶ ಬನಸೋಡೆ, ಶಶಿಕುಮಾರ ಸಿಂಗೆ ದಾವಲ ಬನಸೋಡೆ, ಸಿದರಾಯ ಬನಸೋಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಹಶೀಲದಾರ ಸಂಜಯ ಇಂಗಳೆ ಅವರ ಪರವಾಗಿ ಉಪ ತಹಶೀಲದಾರ ಹುಸನಪ್ಪ ಹೊಸಮನಿ ಅವರು ಮನವಿ ಸ್ವೀಕರಿಸಿದರು.
ಪಿಎಸ್‌ಐ ಸೋಮೇಶ ಗೆಜ್ಜಿ ಅವರು ಮನವಿ ಸ್ವೀಕರಿಸಿದ್ದು, ಪ್ರಕರಣವನ್ನು ಪರಿಶೀಲಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬರವಸೆ ನೀಡಿದ್ದಾರೆ.

