ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಡವರಾದರೂ ತಮ್ಮ ಮಕ್ಕಳನ್ನು ಬಡತನದಲ್ಲಿ ಇರಬಾರದು ಎಂಬ ಆಶಯದಿಂದ ಕೂಲಿ ಕೆಲಸ ಮಾಡಿದರೂ ಶಿಕ್ಷಣ ಕೊಡಿಸಿ ದೊಡ್ಡ ವ್ಯಕ್ತಿಗಳನ್ನಾಗಿಸಬೇಕೆಂಬ ಕನಸು ಇಂದಿನ ಕಾಲದ ಪ್ರತಿಯೊಬ್ಬ ಪಾಲಕರಿಗೂ ಇದೆ. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ನೀತಿ-ನಿಯಮಗಳನ್ನು ಕಲಿಸಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು.
ಪಟ್ಟಣದಲ್ಲಿ ವಿದ್ಯಾಸ್ಪೂರ್ತಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ನವೋದಯ ಕೋಚಿಂಗ್ ಕ್ಲಾಸಿಸ್ ವತಿಯಿಂದ ಆಯೋಜಿಸಿದ್ದ 5ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ, ಪ್ರತಿಭಾ ಪುರಸ್ಕಾರ ಹಾಗೂ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸಂಸ್ಕಾರ ನೀಡುವುದು ಅತ್ಯಂತ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡದೆ ಇದ್ದರೆ ಅವರು ಮೊಬೈಲ್, ಟಿವಿ ಮೊದಲಾದವುಗಳಲ್ಲಿ ಮುಳುಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವ ಸಾಧ್ಯತೆ ಇದೆ. ನಾವು ಭೂಮಿಯಲ್ಲಿ ಬಿತ್ತುವ ಬೀಜದ ಪ್ರಕಾರವೇ ಫಲ ಸಿಗುತ್ತದೆ. ಬೇವಿನ ಬೀಜ ಬಿತ್ತಿಕೊಂಡು ಮಾವಿನ ಹಣ್ಣು ನಿರೀಕ್ಷಿಸುವುದು ಸಾಧ್ಯವಿಲ್ಲ. ಅದೇ ರೀತಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಿದಾಗ ಮಾತ್ರ ಅವರು ಆದರ್ಶ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಮಾತನಾಡಿ, ಮಕ್ಕಳಲ್ಲಿ ನಿಷ್ಕಪಟ ಮತ್ತು ನಿಸ್ವಾರ್ಥ ಗುಣಗಳಿರುತ್ತವೆ. ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯುತ್ತಾ ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ದೊಡ್ಡ ದೊಡ್ಡ ಶಾಲೆಗಳು ಮುಖ್ಯವಲ್ಲ, ಮಕ್ಕಳಲ್ಲಿ ಉತ್ತಮ ಜ್ಞಾನ ಮತ್ತು ಸಂಸ್ಕಾರ ಇದ್ದರೆ ಸಾಕು. ಇಂತಹ ಸಣ್ಣ ಶಾಲೆಗಳಲ್ಲಿಯೂ ದೊಡ್ಡ ವ್ಯಕ್ತಿಗಳಾಗಿ ಬೆಳೆಯಬಹುದು ಎಂದು ಹೇಳಿದರು.
ಸಂತಕವಿ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹೊನ್ನೇಶ ಮುರಗೋಡ, ವಲಯ ಅರಣ್ಯ ಅಧಿಕಾರಿ ರಾಜಶೇಖರ ಲಮಾಣಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಿ.ಪಿ.ಐ. ಶರಣಗೌಡ ಗೌಡರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪರಶುರಾಮ ಕೊಳಮಲಿ, ಮಲ್ಲು ಪವಾರ, ಮುತ್ತು ಕೊಟಗೊಂಡ, ಮಹಾಂತೇಶ ಕಮತಗಿ, ಶಿವಣ್ಣ ಹಂಜಗಿ, ಅಶೋಕ ಬಶೆಟ್ಟಿ, ಕಲ್ಲಪ್ಪ ಕಾಖಂಡಕಿ, ರಾಘವೇಂದ್ರ ಬಡಿಗೇರ, ಯಮನೂರಿ ಮಾಕಾಳಿ, ಶಿವಾನಂದ ಪಡಶೇಟ್ಟಿ, ಬಾಬುರಾವ್ ಬೆಳ್ಳುಬ್ಬಿ, ರಾಜಶೇಖರ ಸಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

