ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸರ್ಕಾರಿ ಕಚೇರಿಗಳ ಮತ್ತು ಶಾಲಾ ಕಾಲೇಜುಗಳ ಸಮಯ ಬದಲಾವಣೆಗೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಆನಂದ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸುರೇಶ ಶಡಶ್ಯಾಳ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗಾಗಲೇ 36 ರಿಂದ 38 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಪ್ರತಿವರ್ಷಕ್ಕಿಂತ ಈ ವರ್ಷ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿರುವುದರಿಂದ ಬಿಸಿಲಿನ ಝಳಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಕಚೇರಿಗೆ ಹೋಗಿ ಕಾರ್ಯನಿರ್ವಹಿಸಲು ಸರ್ಕಾರಿ ನೌಕರ ಸಿಬ್ಬಂದಿಗಳಿಗೆ ಹಾಗೂ ಕೆಲಸ ಕಾರ್ಯಗಳಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರಿಂದ ಸರ್ಕಾರಿ ನೌಕರರಿಗೆ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ನೌಕರರ, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಕಚೇರಿ ಹಾಗೂ ಶಾಲಾ ಕಾಲೇಜುಗಳ ಕರ್ತವ್ಯದ ಅವಧಿಯನ್ನು ಮೇ 31 ರವರೆಗೆ ಬೆಳಗ್ಗೆ 8:30 ರಿಂದ ಮಧ್ಯಾಹ್ನ 1:30 ರವರೆಗೆ ಕರ್ತವ್ಯದ ಸಮಯವನ್ನು ಈ ದಿನದಿಂದಲೇ ಬದಲಾಯಿಸಿ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಆದೇಶಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಖಜಾಂಚಿ ಜುಬೇರ ಕೆರೂರ, ಪ್ರಧಾನ ಕಾರ್ಯದರ್ಶಿ ಶಿವರಾಜ ಬಿರಾದಾರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ, ಸಿದ್ದು ಹಂಚಿನಾಳ, ನಿಜು ಮೇಲಿನಕೆರ, ರಾಮನಗೌಡ ಪಾಟೀಲ, ಎಸ್.ಎಸ್. ಮಗ್ಗದ, ವಿಜಯಕುಮಾರ ಉಮಶೆಟ್ಟಿ, ಖಾಸಿಂಸಾಬ ಮಸಳಿ, ತಾಂಡುರ ಮೇತ್ರಿ, ಬಸವರಾಜ ರಾಹುಲ ಮುಂತಾದವರು ಉಪಸ್ಥಿತರಿದ್ದರು.

