ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಅವಿರಳಜ್ಞಾನಿ ಚನ್ನಬಸವಣ್ಣನವರ ಜನ್ಮಸ್ಥಳ ತಾಲೂಕಿನ ಇಂಗಳೇಶ್ವರ ಗ್ರಾಮದಿಂದ ಚನ್ನಬಸವಣ್ಣನವರ ಐಕ್ಯಸ್ಥಳ ಉಳುವಿಯವರೆಗೆ ಹೊರಟ ಪಾದಯಾತ್ರೆಯ ಯಾತ್ರಾತ್ರಿಗಳನ್ನು ಸೋಮವಾರ ಸ್ವಾಗತಿಸಿಕೊಂಡು ಸ್ಥಳೀಯ ವಿರಕ್ತಮಠದಲ್ಲಿ ಪೂಜೆ ನೆರವೇರಿಸಿದ ನಂತರ ಸೋಮವಾರ ಬೀಳ್ಕೊಡಲಾಯಿತು.
ಸ್ಥಳೀಯ ವಿರಕ್ತ ಮಠದ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಇಂಗಳೇಶ್ವರ ವಚನಶಿಲಾ ಮಂಟಪದ ರೂವಾರಿ ಲಿಂಗೈಕ್ಯ ಚನ್ನಬಸವ ಸ್ವಾಮೀಜಿ 40 ವರ್ಷಗಳವರೆಗೆ ಪಾದಯಾತ್ರೆ ಮಾಡಿರುವದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಸಮಾಜದ ಬದಲಾವಣೆಯ ಉದ್ದೇಶದಿಂದ ಅವರು ಪಾದಯಾತ್ರೆ ಮಾಡಿ ಸಾಕಷ್ಟು ಭಕ್ತರ ಪ್ರೀತಿಯ ಪಾತ್ರರಾಗಿದ್ದರು. ಆ ಪರಂಪರೆಯನ್ನು ಉಳಿಸಿಕೊಂಡು ಅಲ್ಲಿನ ಶ್ರೀಮಠದ ಭಕ್ತರು ಹೋಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಬಸವಾದಿ ಶರಣರ ವಚನ ಸಾಹಿತ್ಯವನ್ನು ಉಳಿಸಿದ ಕೀರ್ತಿಗೆ ಪಾತ್ರರಾದ ಚನ್ನಬಸವಣ್ಣನವರ ಐಕ್ಯಸ್ಥಳ ನಮಗೆಲ್ಲರಿಗೂ ಶ್ರದ್ಧಾ ಕೇಂದ್ರವಾಗಿದೆ. ವಚನ ಸಾಹಿತ್ಯವನ್ನು ಪರಿಚಯಿಸುವದು ಯಾತ್ರೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಾತ್ರಾ ಕಮೀಟಿಯ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಸಂಚಾಲಕ ವೀರಣ್ಣ ಸಜ್ಜನ, ವೀರನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಬಸಮ್ಮ ಮದ್ದರಕಿ, ಬಸನಗೌಡ ಉತ್ನಾಳ, ಬಸವರಾಜ ಅವಟಿ, ಎಂ.ಜಿ. ಆದಿಗೊಂಡ, ವಿವೇಕಾನಂದ ಕಲ್ಯಾಣಶೆಟ್ಟಿ, ಡಾ. ಮಹಾಂತೇಶ ಮಡಿಕೇಶ್ವರ, ಅಪ್ಪು ಧನಶೆಟ್ಟಿ, ಬಬಲಕಿಶೋರ ಅಗರವಾಲ, ಬಾಬು ತೊರವಿ, ಸಂಗಪ್ಪ ಬಶೆಟ್ಟಿ ,ಪಪ್ಪು ಅಗರವಾಲ, ಜಿತೇಂದ್ರ ಅಗರವಾಲ ಇತರರು ಇದ್ದರು.

