ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳು ಪ್ರತಿದಿನವೂ ಯೋಜನಾಬದ್ಧವಾಗಿ ಅಭ್ಯಾಸದ ಕ್ರಮಗಳನ್ನು ಅನುಸರಿಸಿ ಸಕಾರಾತ್ಮಕ ಆಲೋಚನೆಯೊಂದಿಗೆ ಅಧ್ಯಯನ ನಡೆಸಬೇಕು. ಅಭ್ಯಾಸವು ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುತ್ತದೆ ಎಂದು ಸಾಹಿತಿ, ಸಾಂಸ್ಕೃತಿಕ ಚಿಂತಕ ಡಾ.ಮಾಧವ ಗುಡಿ ಅಭಿಪ್ರಾಯಪಟ್ಟರು.
ತಾಲೂಕಿನ ಮನಗೂಳಿ ಪಟ್ಟಣದ ಕೌಟಿಲ್ಯ ಶಿಕ್ಷಣ ಸಂಸ್ಥೆಯ ಶ್ರೀರಾವುಸಾಹೇಬ ಮಾರುತಿರಾವ ಗುಂಡ ಪ್ರೌಢಶಾಲೆಯಲ್ಲಿ ಈಚೆಗೆ ಜರುಗಿದ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ವಿದ್ಯೆ ಪಡೆದವನಿಗೆ ಜಗತ್ತಿನ ತುಂಬೆಲ್ಲ ಅಪಾರ ಗೌರವ ಮನ್ನಣೆ ದೊರೆಯಲಿದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಬಿ.ಸಜ್ಜನಶೆಟ್ಟಿ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯೊಂದಿಗೆ ಗುರಿ ತಲುಪಲು ಕಠಿಣ ಪರಿಶ್ರಮ, ಏಕಾಗ್ರತೆ, ತಾಳ್ಮೆ ಅತ್ಯವಶ್ಯಕ ಎಂದರು.
ಮುಖ್ಯ ಅತಿಥಿ ಸಿ.ಆರ್.ಪಿ ರಮೇಶ ಬೆಳ್ಳುಬ್ಬಿ ಮಾತನಾಡಿ, ಸಮಯವನ್ನು ಗೌರವಿಸುವವರಿಗೆ ಸಮಾಜದಲ್ಲಿ ಅಪಾರ ಮೌಲ್ಯವಿದೆ. ಸಮಯದ ಸದುಪಯೋಗಪಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಬಾಳಬೇಕೆಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕೌಟಿಲ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಠ್ಠಲ ಗಣಿ ಮಾತನಾಡಿದರು.
ವೇದಿಕೆಯಲ್ಲಿ ನಾಗರಾಜ ಹರನಾಳ, ಸಚಿನ ತಳವಾರ, ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀ ಮಾತಾಜಿ ಇದ್ದರು. ವಿದ್ಯಾರ್ಥಿನಿ ಪ್ರಜ್ಞಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಗುರು ಚಂದ್ರಶೇಖರ ಮಾಗಣಗೇರಿ ಸ್ವಾಗತಿಸಿದರು. ಪ್ರಿಯಾಂಕಾ ಗುರುಮಾತೆ ವರದಿ ವಾಚಿಸಿದರು. ಶಿವಲೀಲಾ ಮಾತಾಜಿ ನಿರೂಪಿಸಿದರು. ರಾಜು ವಂದಿಸಿದರು.

