ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಧರ್ಮೋಪದೇಶವು ಸತ್ಯ, ನೈತಿಕತೆ, ಕರ್ತವ್ಯ ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದ ಉನ್ನತ ಗುರಿಗಳನ್ನು ಸಾಧಿಸಲು ಮಾರ್ಗದರ್ಶನ ನೀಡುತ್ತದೆ ಎಂದು ಸಾರಂಗಮಠದ ಪೀಠಾಧಿಪತಿ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಶ್ರೀ ಹುಡೇದ ಲಕ್ಷ್ಮೀ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ನಾಲತ್ತವಾಡದ ಶ್ರೀ ವಿರೇಶ್ವರ ಶರಣರ ಮಹಾಪುರಾಣ ಹಾಗೂ ವಿರೇಶ್ವರ ಶರಣರ ತೊಟ್ಟಿಲು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ನೆಮ್ಮದಿಯ ಬದುಕಿಗೆ ಧರ್ಮ ಪಾಲನೆ ಮಾಡಲು ಮನುಷ್ಯ ಜನ್ಮ ತಾಳಿದ ಮೇಲೆ ಲಿಂಗ ಧರಿಸುವುದರಿಂದ ಬಾಳಿನ ಭಾಗ್ಯೋದಯಕ್ಕೆ ಗುರು ಕಾರುಣ್ಯದ ಬೆಳಕು ನೀಡಿ ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪಿಸುವುದೇ ಗುರುವಿನ ಪರಮ ಧರ್ಮವಾಗಿದೆ ಎಂದರು.
ಈ ವೇಳೆ ಪುರಾಣ ಪ್ರವಚನಕಾರ ವೀರಯ್ಯ ಶಾಸ್ತ್ರೀಗಳು ಮಾತನಾಡಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ ಸ್ವಾಗತಿಸಿ ನಿರೂಪಿಸಿದರು. ವೇದಿಕೆಯ ಮೇಲೆ ದೇವಸ್ಥಾನದ ಅರ್ಚಕ ನಿಂಗಯ್ಯ ಹಿರೇಮಠ ಇದ್ದರು. ವಿಶ್ವನಾಥ ಶರಣಪ್ಪ ಬಿರಾದಾರ ಬಸವಣ್ಣನಾಗಿದರು. ಗವಾಯಿಗಳಾದ ಪ್ರಭುಕುಮಾರ ಮದರಿ ಹಾಗೂ ಲಕ್ಷ್ಮಿಕಾಂತ ಕಲಬುರಗಿ ಸಂಗೀತ ಸೇವೆ ನೀಡಿದರು. ಪುರಾಣ ಪ್ರವಚನದಲ್ಲಿ ಗ್ರಾಮದ ಎಲ್ಲ ಕಮಿಟಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಇದ್ದರು.

