ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ರಾಜ್ಯಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತೇವಾಂಶ ಕಡಿಮೆಯಾಗಿ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಮನುಷ್ಯರು ಮಾತ್ರವಲ್ಲದೆ, ಮೂಕಪ್ರಾಣಿ ಮತ್ತು ಪಕ್ಷಿಗಳು ನೀರಿಲ್ಲದೆ ತತ್ತರಿಸುತ್ತಿರುವ ಕಠಿಣ ಪರಿಸ್ಥಿತಿ ಕಂಡು ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಇಲ್ಯಾಸ್ ಪಟೇಲ್ ಅವರು ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಬತ್ತಿದ ಕೆರೆ ಬಾವಿಗಳು ಕಂಗಾಲಾದ ಜೀವಿಗಳು ಹಿಂದೆ ಹಳ್ಳ, ಕೊಳ್ಳಗಳು, ಕೆರೆ, ಕುಂಟೆಗಳು ಸಮೃದ್ಧವಾಗಿರುತ್ತಿದ್ದವು. ಆದರೆ ಇಂದು ನಗರೀಕರಣ ಹಾಗೂ ಮಳೆಯ ಅಭಾವದಿಂದ ಜಲಮೂಲಗಳು ಬರಿದಾಗಿವೆ. ಬಿಸಿಲಿನ ಝಳಕ್ಕೆ ಹಾರಾಡುವ ಹದ್ದು, ಕಾಗೆ, ಪಾರಿವಾಳಗಳು ಬಸವಳಿದು ನೆಲಕ್ಕೆ ಬೀಳುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಇಲ್ಯಾಸ್ ಪಟೇಲ್ ಅವರ ಈ ಸೇವೆ ಪ್ರಕೃತಿ ಸಂರಕ್ಷಣೆಗೆ ದೊಡ್ಡ ಕೊಡುಗೆಯಾಗಿದೆ.
ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಪಟೇಲ್ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಈ ಸೇವೆಯನ್ನು ಆರಂಭಿಸಿದ್ದು ಸಾರ್ವಜನಿಕರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ಮರುಬಳಕೆ ಮಾಡಿ ಅವುಗಳಲ್ಲಿ ನೀರು ತುಂಬಿಸಿ ಪಕ್ಷಿಗಳಿಗೆ ಕುಡಿಯಲು ಅನುಕೂಲ ಮಾಡಿಕೊಡುತ್ತಿದ್ದಾರೆ. ಕೇವಲ ನೀರುಣಿಸುವುದು ಮಾತ್ರವಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿ ಪರಿಸರ ಕಾಳಜಿಯನ್ನೂ ಪ್ರದರ್ಶಿಸುತ್ತಿದ್ದಾರೆ. ಪ್ರತಿ ದಿನವೂ ಈ ಕಾಯಕವನ್ನು ಮಾಡುತ್ತಾ, ಪ್ರಾಣಿ ಸಂಕುಲದ ಜೀವ ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ.”ಪ್ರಕೃತಿಯ ಜೀವಿಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿ ಇಲ್ಯಾಸ್ ಪಟೇಲ್ ಅವರ ಈ ಕಾರ್ಯವು ಕೇವಲ ಒಂದು ಸೇವೆಯಲ್ಲ, ಅದು ಸಮಾಜಕ್ಕೆ ಒಂದು ಸಂದೇಶ. ಪ್ರತಿಯೊಬ್ಬರೂ ತಮ್ಮ ಮನೆಯ ತಾರಸಿ ಮೇಲೆ ಅಥವಾ ಅಂಗಳದಲ್ಲಿ ಒಂದು ಪಾತ್ರೆ ನೀರು ಇಟ್ಟರೆ, ಸಾವಿರಾರು ಪಕ್ಷಿಗಳ ಜೀವ ಉಳಿಸಬಹುದು ಎಂಬುದು ಇವರ ಆಶಯ. ಇವರ ಈ ದಯಾಳುತನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

