ಬಿ. ಎಲ್. ಡಿ. ಇ. ನೂತನ ಕಲಾಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪುರುಷ ಪ್ರಧಾನ ಸಮಾಜದಲ್ಲಿ ಎಂಥದ್ದೇ ಸಮಸ್ಯೆಗಳು ಎದುರಾದರು ಅವುಗಳನ್ನು ನೀಗಿಸುವ ಶಕ್ತಿ ಮಹಿಳೆಗೂ ಇದೆ ಎಂದು ಶಿಕ್ಷಕಿ-ಸಾಹಿತಿ ಕೆ. ಸುನಂದಾ ಅವರು ಹೇಳಿದರು.
ಪಟ್ಟಣದ ಬಿ. ಎಲ್. ಡಿ. ಇ. ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಹಿಳೆ ಆದವಳು ಎಂದಿಗೂ ದುರ್ಬಲಳಲ್ಲ. ಅವಳು ಪುರುಷನಷ್ಟೇ ಸರಿ ಸಮಾನವಾದ ಎಲ್ಲ ರೀತಿಯ ಕೆಲಸ ಕಾರ್ಯಗಳು ಮಾಡುವ ಅಲ್ಲದೆ, ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಹಾಗೂ ಸವಾಲುಗಳನ್ನು ಎದುರಿಸುವ ಧೀಶಕ್ತಿ ಅವಳಲ್ಲಿದೆ. ಹೆಣ್ಣು ಕುಟುಂಬದ ಅಥವಾ ಅಡುಗೆ ಮನೆಗೆ ಮಾತ್ರ ಸೀಮಿತಳಲ್ಲ. ಇವತ್ತು ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಮೂಲಕ ಸೈ ಎನಿಸಿಕೊಂಡಿದ್ದಾಳೆ. ಯುವತಿಯರಾದ ನೀವು ತಮ್ಮ ವಿದ್ಯಾಭ್ಯಾಸದೊಂದಿಗೆ ಎದುರಾಗುವ ಎಲ್ಲ ರೀತಿಯ ಶೈಕ್ಷಣಿಕ ಸಮಸ್ಯೆಗಳಾಗಲಿ, ಕೌಟುಂಬಿಕ ಸಮಸ್ಯೆಗಳಾಗಲಿ, ಸಾಮಾಜಿಕ ಸಮಸ್ಯೆಗಳಾಗಲಿ, ಇವೆಲ್ಲವುಗಳಿಗೂ ಧೈರ್ಯದಿಂದ ಎದುರಿಸುವ ಎದೆಗಾರಿಕೆ ನಿಮ್ಮಲ್ಲಿ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಜೊತೆಗೆ ತಾವು ತಮ್ಮ ಕುಟುಂಬದಲ್ಲಿ ಅನುಭವಿಸಿದ ಅನೇಕ ಅನುಭವದ ಸನ್ನಿವೇಶಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿನಿಯರಿಗೆ ಭವಿಷ್ಯದ ಬದುಕನ್ನು ಎದುರಿಸಿ ಸಾಧನೆ ಗೈಯುವಂತೆ ಪ್ರೇರಣೆ ನೀಡಿದರು.
ಇದಕ್ಕೂ ಮುನ್ನ ಐಕ್ಯೂಎಸಿ ಸಂಯೋಜಕ ಬಿ. ಎಸ್. ಬೆಳಗಲಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಭಾರತ ದೇಶದಲ್ಲಿ ಹೆಣ್ಣಿಗೆ ಇರುವ ಗೌರವ, ಸ್ಥಾನಮಾನ ಜಗತ್ತಿನ ಬೇರೆ ಯಾವ ರಾಷ್ಟ್ರಗಳಲ್ಲಿಯೂ ಕಾಣಲು ಅಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಎಸ್. ತೋಳನೂರ ಅವರು ಮಾತನಾಡಿ, ಹೆಣ್ಣಾದವಳು ತಾಯಿಯಾಗಿ, ತಂಗಿಯಾಗಿ, ಅಕ್ಕಳಾಗಿ, ಅಜ್ಜಿಯಾಗಿ, ಸೊಸೆಯಾಗಿ, ಮಗಳಾಗಿ ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ತನ್ನದೇ ಆದ ವಿಭಿನ್ನ ಸ್ಥಾನಮಾನಗಳನ್ನು ಹೊಂದಿದ್ದಾಳೆ. ಒಂದು ಮನೆ ಬೆಳಗಲು ಮುಖ್ಯವಾಗಿ ಕಾರಣ ಹೆಣ್ಣು. ಹೀಗಾಗಿ ಮಹಿಳೆಗೆ ನಾವು ದೇವತೆಯ ಸ್ಥಾನಮಾನ ನೀಡಿರುವುದನ್ನು ಕಾಣುತ್ತೇವೆ. ಜಗತ್ತು ಶಿವ ಮತ್ತು ಶಕ್ತಿಯ ಪ್ರತೀಕವಾಗಿ ಇರುವುದನ್ನು ನಾವೆಲ್ಲ ತಿಳಿದಿದ್ದೇವೆ. ಹೆಣ್ಣು ಗಂಡು ಎಂಬ ಭೇದ ಮಾಡದೆ ಇಬ್ಬರು ಸರಿ ಸಮಾನರು ಎಂಬ ಭಾವ ಎಲ್ಲರಲ್ಲಿ ಮೂಡಿದಾಗ ಮಾತ್ರ ಇಂತಹ ದಿನಾಚರಣೆಗಳಿಗೆ ಅರ್ಥ ಬಂದಂತಾಗುತ್ತದೆ ಎಂದರು. ಈ ವೇಳೆ ಕಾಲೇಜಿನಲ್ಲಿ ನಾಲ್ಕು ದಿನಗಳ ಕಾಲ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ. ಪಿ. ಎಸ್. ತೋಳನೂರ, ಐ.ಕ್ಯೂ ಎ.ಸಿ. ಸಂಯೋಜಕರಾದ ಪ್ರೊ. ಬಿ. ಎಸ್. ಬೆಳಗಲಿ, ಎನ್. ಎಸ್. ಎಸ್. ಅಧಿಕಾರಿ ಡಾ. ರವಿಚಂದ್ರ ವಾಲಿಕಾರ, ಉಪನ್ಯಾಸಕಿಯರಾದ ಲಕ್ಷ್ಮೀ ದೇಸಾಯಿ, ಸ್ವಪ್ನಾ ಹಾಲಳ್ಳಿ, ಲಕ್ಷ್ಮೀ ಕಾತ್ರಾಳ, ವಿದ್ಯಾರ್ಥಿನಿ ಪ್ರತಿನಿಧಿ ಶೃತಿ ಖೋತ್, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿದ್ದರು. ವಿದ್ಯಾರ್ಥಿನಿ ಲಕ್ಷ್ಮೀ ಕಳ್ಳಿಮಠ ನಿರೂಪಿಸಿದರು, ರಕ್ಷಿತಾ ಪ್ರಾರ್ಥಿಸಿದರು, ಜ್ಯೋತಿ ನಾವಿ ಸ್ವಾಗತಿಸಿದರು, ಪವಿತ್ರಾ ಕೊಣ್ಣೂರ ವಂದಿಸಿದರು.

