ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ನಾಡಿನ ಪ್ರತಿಯೊಂದು ಹಳ್ಳಿ ಪಟ್ಟಣ ನಗರ ಪ್ರದೇಶಗಳಲ್ಲಿ ಸಂಗೀತ ಲೋಕದ ಜ್ಞಾನ ಪಡೆಯಲು ಹೊಸ ಹೊಸ ಪ್ರತಿಭೆಗಳು ಉದಯಿಸಬೇಕು ಎಂದು ಕನಸು ಕಂಡಂತೆ ವಿಶ್ವಕ್ಕೆ ಗಾಯನ ಲೋಕವನ್ನಷ್ಟೆ ಅಲ್ಲದೆ ಸಂಗೀತ ಕ್ಷೇತ್ರದಲ್ಲಿ ಪ್ರತಿಭಾನ್ವಿತ ವಿವಿಧತೆಯ ಕಲಾವಿದರನ್ನು ಪರಿಚಯಿಸಿದ ಮಹಾನ್ ದೈವಿಶಕ್ತಿಯ ಪುರುಷರು ಗುರು ಪುಟ್ಟರಾಜ ಗವಾಯಿಗಳು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಕೊಲ್ಹಾರ ತಾಲೂಕ ಜಾನಪದ ಪರಿಷತ್ ಹಾಗೂ ಕಲಾವಿದರ ಬಳಗದವರು ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಕಂಬಿ ಮಂಟಪದ ಆವರಣದಲ್ಲಿ ಹಮ್ಮಿಕೊಂಡ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಹಿಂದಿನ ಪೀಠಾಧಿಕಾರಿಗಳಾದ ಪಂಡಿತ ಪುಟ್ಟರಾಜ ಗವಾಯಿವರ ಜನ್ಮ ದಿನೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆದುನಿಕ ಜಗತ್ತಿನಲ್ಲಿ ಹಿಂದಿನ ತಲೆಮಾರಿನ ಹಳೇ ಕಾಲದ ಭಜನೆ, ಕೀರ್ತನೆ, ಹರಿದಾಸ ಪುರಾಣ ಪ್ರವಚನ ಆಧುನಿಕ ಶೈಲಿಯ ಸಂಗೀತ ವಾದ್ಯಗಳ ಶಿಕ್ಷಣ ಕಲಿಯುವದರ ಜೊತೆಗೆ ಗಾಯನ ಲೋಕದಲ್ಲಿ ಮಾತ್ರವಲ್ಲದೇ ಇನ್ನೀತರ ಕಲೆಯನ್ನು ಉಳಿಸಿಕೊಂಡು ಮುಂದಿನ ಕಲೆಯನ್ನು ಆರಾಧಿಸುವ ಆಸಕ್ತ ಯುವ ಸಮೂಹ ಕಲಿಕೆಯಲ್ಲಿ ತೊಡಗಿಕೊಂಡು ಸಂಗೀತ ಕ್ಷೇತ್ರದಲ್ಲಿ ನವತಾರೆಗಳು ಉದಯಿಸುವಂತಾಗಲು ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳ ಕೃಪೆ ಆಗಲಿ ಎಂದರು.
ಸರ್ವಾಧಿಕಾರಿ ಧೊರಣೆಯ ಪುರುಷ ಪ್ರಧಾನ ರಾಷ್ಟ್ರಗಳಲ್ಲಿ ಹೆಣ್ನಿಗೆ ಗೌರವ ಕೊಡುವ ಸಂಪ್ರದಾಯ ಇಲ್ಲದ ಪ್ರಯುಕ್ತ ಅಂತಹ ರಾಷ್ಟçಗಳನ್ನು ಮುನ್ನಡೆಸುವ ನಾಯಕರುಗಳಿಗೆ ಸ್ತ್ರೀಕುಲದ ಶಾಪ ತಟ್ಟಿ ವಿನಾಶದ ಅಂಚಿನ ಕಡೆಗೆ ಸಾಗುತ್ತಿದ್ದರೂ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕೆನ್ನುವ ಮನಸ್ಥಿತಿ ಬರದೇ ಇರುವದು ಅತ್ಯಂತ ಖೇದಕರ ಸಂಗತಿ. ನಾವು ನಮ್ಮ ದೇಶವನ್ನು ಭಾರತ ಮಾತೆಯ ಎಂದು ಹೇಗೆ ಪೂಜಿಸುತ್ತೇವೆಯೋ ಹಾಗೇಯೇ ಭಾರತೀಯರಾದ ನಾವುಗಳು ಭೂಮಿ ಮತ್ತು ಮಹಿಳೆಯರನ್ನು ಅತ್ಯಂತ ಪೂಜ್ಯ ಭಾವನೆಯಿಂದ ನೋಡುವ ವಿಶ್ವದ ಏಕೈಕ ರಾಷ್ಟ್ರವೆಂದರೆ ಭರತ ಖಂಡವಾಗಿದೆ ಎಂದರು.
ಈ ಸಂದರ್ಭದಲ್ಲಿ ಈರಯ್ಯ ಹಲಗಯ್ಯ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಮಲ್ಲಯ್ಯ ಗಣಕುಮಾರ ಪೂಜೆಯನ್ನು ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿದರು. ಕಲಾವಿದರು ಸಂಗೀತ ಸೇವೆಯನ್ನು ನೀಡಿದರು. ಚಂದ್ರಶೇಖರಯ್ಯ ಗಣಕುಮಾರ ಸಾನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಚಿನ್ನಪ್ಪ ನಾ ಗಿಡ್ಡಪ್ಪಗೋಳ, ವಿರುಪಾಕ್ಷಿ ಕೋಲಕಾರ, ಸಂಗಪ್ಪ ಗೂಳಿ, ಆಗಮಿಸಿದ್ದರು. ಭಿಮಪ್ಪ ಬೀಳಗಿ, ಮಲ್ಲಪ್ಪ ಈ ಗಣಿ, ಕಲಾವತಿ ಬ ಗಣಿ, ರೇಣುಕಾ ಮಹಾದೇವಿ ಮಠಪತಿ, ಸರಸ್ವತಿ ಆಣಿ, ಸಂಗಮ್ಮ ಮಠಪತಿ, ಸಂಗಮ್ಮ ತುಪ್ಪದ, ಉಪಸ್ಥಿತರಿದ್ದರು. ಪರಶುರಾಮ ಬ ಗಣಿ ಸ್ವಾಗತಿಸಿ ನಿರೂಪಿಸಿದರು.

