ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಮ್ಮ ಜಮಖಂಡಿಯ ಅನೇಕ ಪ್ರತಿಭೆಗಳು ಇಂದು ರಾಜ್ಯಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿ ವಿರಾಜಮಾನರಾಗಿದ್ದಾರೆ, ಕ್ರಮಬದ್ಧವಾದ ಅಭ್ಯಾಸದಿಂದ ಇದು ಸಾಧ್ಯವಾಗಿದೆ ವಿದ್ಯಾರ್ಥಿಗಳಾದ ನೀವು ಕ್ರಮಬದ್ಧವಾದ ಅಧ್ಯಯನದಿಂದ ನೂರಕ್ಕೆ ನೂರು ಅಂಕ ಪಡೆಯಬಹುದು ಎಂದು ಜಮಖಂಡಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕುಂಬಾರಹಳ್ಳದ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹಸಮ್ಮೇಳನ, ಪಾಲಕ ಪೋಷಕರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟಕರಾಗಿ ಮಾತನಾಡುತ್ತಾ, ಜ್ಞಾನವು ಮಾನವನಿಗೆ ಹಿರಿದಾದ ಬಲವನ್ನು ನೀಡುತ್ತದೆ ಅದನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ, ಮಕ್ಕಳಾದ ನೀವು ಪಠ್ಯದ ಜೊತೆ ಇತರೆ ಪುಸ್ತಕಗಳನ್ನು ಓದಿ ಜ್ಞಾನಿಗಳಾಗಿ, ಗ್ರಂಥಗಳಲ್ಲಿ ಬರುವ ಜೀವನ ತತ್ವ, ಸತ್ವಗಳನ್ನು ಬಾಳಿನಲ್ಲಿ ಅಳವಡಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಾನಿಧ್ಯ ವಹಿಸಿದ ಜಮಖಂಡಿಯ ಓಲೆ ಮಠದ ಶ್ರೀ ಆನಂದ ದೇವರು ಮಾತನಾಡಿ, ಇಂದು ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಎಲ್ಲರಿಗೂ ತೊಟ್ಟಿಲ ಕಟ್ಟು, ಬಾಸಿಂಗ ಕಟ್ಟು, ಚಟ್ಟದ ಕಟ್ಟು ಸಾಮಾನ್ಯವಾಗಿದೆ , ನೀವು ಅದನ್ನು ಮೀರಿ ಜೀವನವನ್ನು ಕಟ್ಟಬೇಕಾಗಿದೆ, ಗುರುಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಇದು ಸಾಧ್ಯವಾಗುತ್ತದೆ, ಕುಂಬಾರಹಳ್ಳದ ಮಕ್ಕಳಲ್ಲಿ ವಿಶೇಷ ಶಕ್ತಿಯಿದೆ, ಇಲ್ಲಿಯ ಗುರುವೃಂದದವರಲ್ಲಿ ತಾಯ್ತನವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಡಿ.ಸಂಖ, ಚಾರ್ಟರ್ಡ್ ಅಕೌಂಟೆಂಟ್ ಧರೆಪ್ಪ ಮರನೂರ, ಸದಾಶಿವ ಮರನೂರ, ಹನಮಂತ ಮರನೂರ ಮಕ್ಕಳಿಗೆ ಶುಭಹಾರೈಸಿದರು.
ಶಾಲೆಯ ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವರ್ಗ ಶಿಕ್ಷಕರಾದ ಶಾರದಾ ಮಠ, ಶಿಕ್ಷಕ ಸಂಗನಬಸವ ಉಟಗಿ, ಶಿಕ್ಷಕ ಬಾಹುಬಲಿ ಮುತ್ತೂರ ಮಾತನಾಡಿದರು.
ಮಕ್ಕಳಾದ ಕೃತ್ತಿಕಾ ಬಣಕಾರ, ಸಾಗರ ಕುರಣಿ, ಭವಾನಿ ಗುಣದಾಳ, ಮುತ್ತುರಾಜ ತೇರದಾಳ, ಅಶ್ವಿನಿ ಮಾಂಗ, ಚೇತನ ಸಾಳಗುಂದಿ, ಚೈತ್ರ ತೇರದಾಳ ಮಾತನಾಡಿದರು.
2024-25ರಲ್ಲಿ ಶಾಲೆಗೆ ಪ್ರಥಮಾ, ದ್ವಿತೀಯ, ತೃತೀಯ ಬಹುಮಾನ ಪಡೆದ ಐಶ್ವರ್ಯಾ ಕುರಣಿ, ತರುಣ ಘಟ್ನಟ್ಟಿ, ಮಧುಮತಿ ಚಿಕ್ಕಲಕಿ ಇವರನ್ನು ಪ್ರತಿಭಾಫಲಕ ನೀಡಿ ಸನ್ಮಾನಿಸಲಾಯಿತು. ಕನ್ನಡ ಮತ್ತು ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕ,ಮತ್ತು ಗಣಿತದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕರೆಪ್ಪ ಹೆಗಡೆ ಮತ್ತು ನೀಲವ್ವಾ ಸೊನ್ನದ, ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಾಧನೆಗೈದ ನಿಂಗವ್ವ ಮರನೂರ, ಚಿತ್ರಕಲೆಯಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು.
ಕುಮಾರ ಸಾಗರ ಕುರಣಿ ಮತ್ತು ಕುಮಾರಿ ಭವಾನಿ ಗುಣದಾಳ ಇವರನ್ನು ಆದರ್ಶ ವಿದ್ಯಾರ್ಥಿ, ವಿದ್ಯಾರ್ಥಿನಿ ಎಂದು ಘೋಷಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಬಸವರಾಜ್ ಮರನೂರ, ಧರೆಪ್ಪ ಮಂಟೂರ, ರಾಜು ಮಾಳಿ, ರಮೇಶ್ ಮರನೂರ, ಅಜಯ್ ಕಡಪಟ್ಟಿ, ಮಲ್ಲು ದಾನಗೌಡ, ಶಿಕ್ಷಕರಾದ ಸಂಜೀವ ಝಂಬುರೆ, ಆಸಿಪಾ ಭಾನು ಮೋಮಿನ್, ಮಂಜುಳಾ ಕಡಕೋಳ, ಸವಿತಾ ಬೆನಕಟ್ಟಿ, ಶಕುಂತಲಾ ಬಿರಾದಾರ್ ಮುಂತಾದವರು ಉಪಸ್ಥಿತರಿದ್ದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ನಿಂಗಪ್ಪ ತೇರದಾಳ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಶಾರದಾ ಮಠ ಮತ್ತು ಸಂಗಮೇಶ ಉಟಗಿ ನಿರೂಪಿಸಿದರು. ಚಂದ್ರಕಾಂತ ಪೋಲೀಸ್ ವಂದಿಸಿದರು.

