ಕಾಡಾನೆ ದಾಳಿಗೆ ರೈತ ಬಲಿ, ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಸರಗೂರು : ತಾಲೂಕಿನಲ್ಲಿ ಮಾನವ-ಕಾಡುಪ್ರಾಣಿ ಸಂಘರ್ಷಕ್ಕೆ ತಡೆ ಬೀಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಒಂದೇ ತಿಂಗಳಲ್ಲಿ ಹುಲಿ ನಾಲ್ವರ ಮೇಲೆ ದಾಳಿ ನಡೆಸಿ, ಮೂವರನ್ನು ಬಲಿ ಪಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಆನೆ ದಾಳಿಗೆ ರೈತನೋರ್ವ ಬಲಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಬಹಿರ್ದೆಸೆಗೆ ತೆರಳಿದ ರೈತನ ಮೇಲೆ ಆನೆ ದಾಳಿ ನಡೆಸಿ, ತುಳಿದು ಸಾಯಿಸಿದೆ.
ತಾಲೂಕಿನ ಬಿ.ಮಟಕೆರೆ ಎಸ್ಟಿ ಕಾಲೋನಿ ಹಾಡಿ ನಿವಾಸಿ ಮಾದ(70) ಕಾಡಾನೆ ದಾಳಿಗೆ ಬಲಿಯಾದ ರೈತ. ಎಂದಿನಂತೆ ಮೃತ ಮಾದ ಹಾಡಿ ಸಮೀಪದ ವಾಟರ್‌ಟ್ಯಾಂಕ್ ಕೆಳಗಡೆ ಮಲಗಿದ್ದ. ಬುಧವಾರ ರಾತ್ರಿ ಅಲ್ಲೇ ಮಲಗಿ ಬೆಳಗ್ಗೆ 5.30ರ ಸುಮಾರಿಗೆ ಬಯಲು ಬಹಿರ್ದೆಸೆಗೆ ಬಂದಿದ್ದಾನೆ. ಈ ವೇಳೆ ಮಾದನ ಮೇಲೆ ಆನೆ ಅಟ್ಯಾಕ್ ಮಾಡಿದೆ. ಗಂಭೀರ ಗಾಯಗೊಂಡಿದ್ದ ರೈತ ಮಾದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಮೃತದೇಹ ನೋಡಿ ಹಾಡಿ ಜನರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮಾದನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸರಗೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಮನೆಯವರಿಗೆ ಮೃತದೇಹ ಒಪ್ಪಿಸಲಾಯಿತು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಆಗಮಿಸಿದ ಸಿಎಫ್ ಎಸ್.ಪ್ರಭಾಕರನ್, ಅರಣ್ಯ ಇಲಾಖೆ ವತಿಯಿಂದ ಮೃತರ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರದ ಚೆಕ್ ವಿತರಿಸಿದರು. ಮೃತನ ಪತ್ನಿಗೆ ಐದು ವರ್ಷದವರೆಗೆ ಮಾಸಿಕ ವೇತನ 4 ಸಾವಿರ ರೂಪಾಯಿ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಗ್ರಾಮಸ್ಥರು ಅರಣ್ಯಾಧಿಕಾರಿಗಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೋಟ್ :
ರೈತ ಮಾದನ ಸಾವು ನನಗೆ ನೋವು ತಂದಿದೆ. ಮಾನವ-ಕಾಡುಪ್ರಾಣಿ ಸಂಘರ್ಷ ತಡೆಗೆ ಸೂಕ್ತ ಕ್ರಮ ತೆಗೆದುಕೊಂಡು ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಲಾಗುವುದು. ರೈಲ್ವೆ ಬ್ಯಾರಿಕೇಡ್, ಆನೆ ಕಂದಕಗಳಲ್ಲಿ ಹೂಳು ಎತ್ತಿಸಿ ಆನೆ ಹೊರಬರದಂತೆ ಕ್ರಮವಹಿಸಲು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ವಿಧಾನಸಭೆ ಅಧಿವೇಶನ ಬಳಿಕ ಮೃತ ಕುಟುಂಬಸ್ಥರ ಮನೆಗೆ ತೆರಳಿ ಸಾಂತ್ವನ ಹೇಳಿ ಅವರ ನೆರವಿಗೆ ಮುಂದಾಗುತ್ತೇನೆ.
— ಅನಿಲ್ ಚಿಕ್ಕಮಾದು, ಶಾಸಕರು

