ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಚೌಧರಿ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಮೀನುಗಾರಿಕಾ ವಲಯಕ್ಕೆ ಬರೋಬ್ಬರಿ ₹2,761.80 ಕೋಟಿ ಮೀಸಲಿಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಚೌಧರಿ ಶ್ಲಾಘಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಶೇಷವಾಗಿ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಮೀನುಗಾರಿಕೆಗೆ ತೆರಿಗೆ ವಿನಾಯಿತಿ ನೀಡಿರುವುದು ಮತ್ತು ಅಲ್ಲಿ ಹಿಡಿದ ಮೀನಿಗೆ ರಫ್ತು ಸ್ಥಾನಮಾನ ನೀಡಿರುವುದು ನಮ್ಮ ಮೀನುಗಾರರಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಧೈರ್ಯ ನೀಡಿದೆ. ಸೀಗಡಿ ಕೃಷಿಗೆ ಅಗತ್ಯವಿರುವ ಇನ್‌ಪುಟ್‌ಗಳ ಮೇಲಿನ ಆಮದು ಸುಂಕ ತಗ್ಗಿಸಿರುವುದು ಮತ್ತು 500 ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಒಳನಾಡು ಮೀನುಗಾರರಿಗೂ ನೆರವಾಗಲಿದೆ ಎಂದಿದ್ದಾರೆ.
ಆದರೆ, ನಾಣ್ಯಕ್ಕೆ ಇನ್ನೊಂದು ಮುಖವಿದೆ. ದೇಶದ ಸಾಮಾನ್ಯ ಮೀನುಗಾರನ ಅತಿದೊಡ್ಡ ಸಮಸ್ಯೆಯೇ ಡೀಸೆಲ್ ಬೆಲೆ. ನಾವು ನಿರೀಕ್ಷಿಸಿದಂತೆ ಬಜೆಟ್‌ನಲ್ಲಿ ಡೀಸೆಲ್ ಸಬ್ಸಿಡಿ ಬಗ್ಗೆ ಯಾವುದೇ ಘೋಷಣೆ ಇಲ್ಲದಿರುವುದು ತೀವ್ರ ನಿರಾಸೆ ತಂದಿದೆ. ಬೋಟುಗಳ ನಿರ್ವಹಣಾ ವೆಚ್ಚ ವಿಪರೀತವಾಗಿದ್ದು, ಸಣ್ಣ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಕೋಟಿಗಳ ಲೆಕ್ಕಾಚಾರದಲ್ಲಿ ಉದ್ಯಮಕ್ಕೆ ಲಾಭವಾಗಿದ್ದರೂ, ದಿನನಿತ್ಯ ಸಮುದ್ರಕ್ಕೆ ಇಳಿಯುವ ಬಡ ಮೀನುಗಾರನಿಗೆ ನೇರ ಆರ್ಥಿಕ ನೆರವು ಅಥವಾ ಸಾಲ ಮನ್ನಾದಂತಹ ಪ್ಯಾಕೇಜ್ ಮಿಸ್ ಆಗಿದೆ. ಮೀನುಗಾರರ ಸುರಕ್ಷಾ ಉಪಕರಣಗಳಿಗೆ ವಿಶೇಷ ಪ್ಯಾಕೇಜ್ ಅಥವಾ ಸಾಲ ಮನ್ನಾದಂತಹ ಘೋಷಣೆಗಳನ್ನು ನಾವು ನಿರೀಕ್ಷಿದ್ದೆವು, ಅದು ಹುಸಿಯಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಇದು ಉದ್ಯಮಿಗಳಿಗೆ ಹಬ್ಬ, ಆದರೆ ಸಾಮಾನ್ಯ ಮೀನುಗಾರರಿಗೆ ಅಲ್ಪ ತೃಪ್ತಿ ನೀಡಿದ ಬಜೆಟ್ ಆಗಿದೆ ಎಂದು ಡಾ.ಗೌತಮ್ ಚೌಧರಿ ತಿಳಿಸಿದ್ದಾರೆ.

