ಬರಡೋಲದಲ್ಲಿ ಮಡಿವಾಳ ಮಾಚಿದೇವರ ಜಯಂತಿ
ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಭಕ್ತಿಭಾವದಿಂದ ಶ್ರೀ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬರಡೋಲ ಗ್ರಾಮದ ಪೂಜ್ಯ ದಾನಯ್ಯ ಕಂಠಿಕಾರ್ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬರಡೋಲ ಗ್ರಾಮದ ವಕೀಲರಾದ ಶ್ರೀ ಜಿ.ಎಸ್. ಪವಾರ್ ಅವರು, 12ನೇ ಶತಮಾನದಲ್ಲಿ ಬಸವಣ್ಣನ ಸಮಕಾಲೀನರಾಗಿದ್ದ ಶರಣ ಮಡಿವಾಳ ಮಾಚಿದೇವರು ವಚನ ಸಾಹಿತ್ಯದಲ್ಲಿ ಅಪಾರ ಜ್ಞಾನ ಹೊಂದಿದ್ದ ಮಹಾನ್ ಚಿಂತಕರಾಗಿದ್ದರು ಎಂದು ಕೊಂಡಾಡಿದರು. ಅವರು ಸರಿಸುಮಾರು ಒಂದು ಕೋಟಿಗೂ ಅಧಿಕ ವಚನಗಳನ್ನು ರಚಿಸಿದ್ದರೆಂದು ಹೇಳಲಾಗುತ್ತದೆ. ಆದರೆ ದುರದೃಷ್ಟವಶಾತ್ ಇಂದು ಕೇವಲ 364 ವಚನಗಳು ಮಾತ್ರ ಲಭ್ಯವಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಡಿವಾಳ ಮಾಚಿದೇವರು ಯಾವುದೇ ಒಂದು ಜಾತಿ ಅಥವಾ ಸಮಾಜಕ್ಕೆ ಸೀಮಿತ ವ್ಯಕ್ತಿಯಲ್ಲ. ಅವರು ಸಂಪೂರ್ಣ ದೇಶದ ಹೆಮ್ಮೆ. ಆದ್ದರಿಂದ ಮಹಾಪುರುಷರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸದೆ, ಮಾನವಕುಲಕ್ಕೆ ಮಾರ್ಗದರ್ಶನವಾಗುವಂತೆ ಆಚರಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಬರಡೋಲ ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಿದೇವರ ಮೂರ್ತಿಯನ್ನು ಸ್ಥಾಪಿಸಲು ಸಹಕರಿಸುವುದಾಗಿ ಸಮಾಜದ ಹಿರಿಯರ ಸಮ್ಮುಖದಲ್ಲಿ ವಾಗ್ದಾನ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಪಿಕೆಪಿಎಸ್ಸಿ ಸದಸ್ಯರು, ಗ್ರಾಮದ ಮಹಿಳೆಯರು, ಮುಖಂಡರು, ರೈತರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

