ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ:
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಹಕರ ನಂಬಿಕಸ್ಥ ಸೇವೆ ಹಾಗೂ ತಾಂತ್ರಿಕ ನಾವಿನ್ಯತೆಯ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ)ಇಡೀ ದೇಶದಲ್ಲಿಯೇ ನಂ-1 ಸರ್ಕಾರಿ ಸೌಮ್ಯದ ವಿಶ್ವಾಸಾರ್ಹ ಬ್ಯಾಂಕ್ ಆಗಿದೆ ಎಂದು ಡೆಪ್ಯೂಟಿ ಜನರಲ್ ಮ್ಯಾನೇಜರ್ ಜ್ಯೋತಿ ಎನ್ ಮೊಹಾಂತಿ ಹೇಳಿದರು.
ಆಲಮಟ್ಟಿಡ್ಯಾಂಸೈಟ್ ನ ರಂಗಮಂದಿರ ಪಕ್ಕದ ಸ್ಥಳಕ್ಕೆ ಸ್ಥಳಾಂತರಗೊಂಡ ಎಸ್.ಬಿ.ಐ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಲಮಟ್ಟಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಡಿಪಾಸಿಟ್ ಯಂತ್ರ, ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿ ಎಟಿಎಂ ಸದಾ ಚಾಲು ಇರುವ ಸ್ಥಿತಿಯಲ್ಲಿ ಒದಗಿಸಲಾಗುವುದು ಎಂದರು.
ನೂತನ ಕಟ್ಟಡ ಅತ್ಯಾಧುನಿಕವಾಗಿದ್ದು, ಗ್ರಾಹಕರಿಗೆ ಎಲ್ಲಾ ರೀತಿಯ ಸೌಲಭ್ಯ, ತ್ವರಿತಗತಿಯಲ್ಲಿ ಒದಗಿಸಲು ಕ್ರಮವಹಿಸಲಾಗುವುದು ಎಂದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಸ್ಥಳ ಆಲಮಟ್ಟಿ ಇರುವುದರಿಂದ ಇದೇ ಬ್ಯಾಂಕ್ ಮೂಲಕ ಹೆಚ್ಚಿನ ಹಣಕಾಸಿನ ವಹಿವಾಟು ನಡೆಯುತ್ತಿದೆ, ಬ್ಯಾಂಕ್ ನ ಮೂಲಕವೇ ಕೆಬಿಜೆಎನ್ ಎಲ್ ನೌಕರರ ವೇತನವೂ ಪಾವತಿಯಾಗುತ್ತಿದೆ ಎಂದರು.
ಪ್ರಾದೇಶಿಕ ಪ್ರಬಂಧಕ ವಿಕಾಸ ಭಾಗೋತ್ರ, ಮೌನಿಶ್ ಎಸ್, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಉಪಮುಖ್ಯ ಎಂಜಿನಿಯರ್ ಐ.ಎಲ್. ಕಳಸಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ದಳವಾಯಿ, ಅಶೋಕ ಮುಳಸಾವಳಗಿ ಮತ್ತೀತರರು ಇದ್ದರು.

