ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿದೆ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗವು, ಕಾಲೇಜಿನ ವೈಜ್ಞಾನಿಕ, ಶೈಕ್ಷಣಿಕ, ಸಂಶೋಧನಾ ಸಮಿತಿ (SARS), ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘ (ASI) ಮತ್ತು ಭಾರತೀಯ ವೈದ್ಯಕೀಯ ಸಂಘ (IMA) ಸಹಯೋಗದೊಂದಿಗೆ ನಾನಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಫೆಬ್ರವರಿ 3 ಮತ್ತು 4 ರಂದು ಮಧ್ಯಾಹ್ನ 12 ರಿಂದ 1ರ ವರೆಗೆ ಸ್ನಾತಕ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ವರ್ಷದ ಧ್ಯೇಯವಾಕ್ಯ “ಅನನ್ಯತೆಯಿಂದ ಒಂದುಗೂಡಿದೆ” ವಿಷಯದ ಕುರಿತು ನಿಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಫೆಬ್ರವರಿ 4 ರಂದು ಮುಂಜಾನೆ 11 ಘಂಟೆಗೆ ಬಿ.ಎಲ್.ಡಿ.ಇ ಮಹಿಳಾ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಸಂಜೀವ ರಾಠೋಡ ಕ್ಯಾನ್ಸರ್ ಕುರಿತು ಉಪನ್ಯಾಸ ನೀಡಲಿದ್ದಾರೆ.
ಇದೇ ದಿನ ಮತ್ತೋರ್ವ ಸಹಾಯಕ ಪ್ರಾಧ್ಯಾಪಕ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಶೈಲೇಶ ಕನ್ನೂರ ರೇಡಿಯೋ ಬಾನುಲಿಯಲ್ಲಿ ಕ್ಯಾನ್ಸರ್ ಜಾಗೃತಿಯ ಕುರಿತು ಮಾತನಾಡಲಿದ್ದಾರೆ.
ಫೆಬ್ರವರಿ 2 ಸೋಮವಾರದಿಂದ ಫೆಬ್ರವರಿ 7 ಶನಿವಾರ ವರೆಗೆ ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ಒಪಿಡಿ ನಂ.10 ರಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ, “ಕ್ಯಾನ್ಸರ್ ಉಚಿತ ತಪಾಸಣೆ ಮತ್ತು ಜಾಗೃತಿ ಅಭಿಯಾನದ ಸಪ್ತಾಹ” ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ನಾನಾ ವಿಭಾಗಗಳ ತಜ್ಞವೈದ್ಯರು ತಪಾಸಣೆ ಮಾಡಿ, ಅಗತ್ಯವಿದ್ದಲ್ಲಿ ಸೂಜಿ ತಪಾಸಣೆ (FNAC), ಮೆಮೊಗ್ರಾಫಿ, ಪ್ಯಾಪ್ ಸ್ಮಿಯರ್, ಬಯಾಪ್ಸಿ, ಸ್ಕ್ಯಾನಿಂಗ್ ನಂಥ ಪರೀಕ್ಷೆಗಳನ್ನು ಮಾಡುವರು.
ಈ ಶಿಬಿರಕ್ಕೆ ಆಗಮಿಸುವ ಜನರು ಬರುವಾಗ ತಮ್ಮ ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್. ಕಾರ್ಡುಳನ್ನು ತರಬೇಕು. ವಿಜಯಪುರ ಜಿಲ್ಲೆಯ ಮತ್ತು ನೆರೆಯ ಜಿಲ್ಲೆಗಳ ಜನರು ಈ ಶಿಬಿರದ ಸದುಪಯೋಗವನ್ನು ಪಡೆಯಬೇಕು ಎಂದು ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
