ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಜೇಮ್ಸ್ ಎಲ್ಲೀಸ್ ಅವರು, “ವೃತ್ತಪತ್ರಿಕೆಗಳು ಈ ಜಗತ್ತಿನ ಕನ್ನಡಿ ಇದ್ದಂತೆ” ಎಂದು ಹೇಳಿದ್ದಾರೆ. ಅಂದರೆ ವಿಶ್ವದೆಲ್ಲೆಡೆ ನಡೆದ ಘಟನೆ, ಪ್ರಚಲಿತ ಮತ್ತು ಮುಂದೆ ನಡೆಯಬಹುದಾದ ಸಂಗತಿಗಳ ಬಗ್ಗೆ ಮಾಹಿತಿ ನೀಡುವ ಒಂದು ಪರಿಣಾಮಕಾರಿ ಸಂವಹನ ಮತ್ತು ಮಾಧ್ಯಮವಾಗಿದೆ. ಪ್ರತಿಯೊಬ್ಬರೂ ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲಿ ಟೀ ಅಥವಾ ಕಾಫಿ ಹಿಡಿದು ವೃತ್ತಪತ್ರಿಕೆಯನ್ನು ಒದುತ್ತಿರುವದನ್ನು ನಾವೆಲ್ಲರೂ ಕಂಡಿದ್ದೇವೆ. ರಾಜ್ಯ, ದೇಶ-ವಿದೇಶಗಳ ಸುದ್ದಿಗಳನ್ನು ಪ್ರತಿ ಮನೆಗೆ ತಲುಪಿಸುವ ಏಕೈಕ ಸಾಧನವೆಂದರೆ ಅದುವೇ ವೃತ್ತಪತ್ರಿಕೆ. ನಾವು ಇಡೀ ವಿಶ್ವದ ದಶ ದಿಕ್ಕುಗಳ (ನಾರ್ಥ, ಈಸ್ಟ್, ವೆಸ್ಟ್ & ಸೌಥ್) ದೈನಂದಿನ ದಿನಚರಿ ಮತ್ತು ಆಗಿ ಹೋದ ಘಟನೆಗಳ ಬಗ್ಗೆ ತಿಳಿಸುವ ಪತ್ರಿಕೆಯ ಕಾರ್ಯ ಶ್ಲಾಘನೀಯ. ನಮಗೆ ಜಗತ್ತಿನ ಎಲ್ಲ ಅಗು-ಹೋಗುಗಳ ಕುರಿತು ತಿಳಿಸಿಕೊಡುವುದೇ ವೃತ್ತಪತ್ರಿಕೆ. ಇಂದಿನ ಡಿಜಿಟಲ್ ಯುಗದಲ್ಲಿ ವೃತ್ತಪತ್ರಿಕೆಯು ಇ-ಪೇಪರ್, ಸಾಮಾಜಿಕ ಜಾಲತಾಣ ಮತ್ತು ವಿವಿಧ ವೆಬಸೈಟಗಳ ಮೂಲಕವೂ ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುತ್ತಾ ಅತ್ಯಂತ ವಿಶ್ವಾಸಾರ್ಹ ಸಂಪರ್ಕ-ಸಂವಹನ ಮಾಧ್ಯಮವಾಗಿ ಪರಿಣಮಿಸಿದೆ.

ಇತಿಹಾಸ
೧೭೮೦ ರ ಜನೇವರಿ ೨೯ ರಂದು ದೇಶದ ರಾಜಧಾನಿಯಾಗಿದ್ದ ಕೋಲ್ಕತ್ತಾದಲ್ಲಿ ಜೇಮ್ಸ್ ಅಗಸ್ಟಸ್ ಹಿಕಿ ಎಂಬುವವರು ಮೊಟ್ಟಮೊದಲ ವೃತ್ತಪತ್ರಿಕೆ ‘ಬೆಂಗಾಲ್ ಗೆಜೆಟ್’ ನ್ನು ಪ್ರಾರಂಭಿಸಿದರು. ಈ ದಿನದ ಸವಿ ನೆನಪಿಗಾಗಿ ಪ್ರತಿ ವರ್ಷ ಜನೇವರಿ ೨೯ ರಂದು ಭಾರತೀಯ ವೃತ್ತ ಪತ್ರಿಕೆಯ ದಿನವನ್ನು ಆಚರಿಸಲಾಗುತ್ತಿದೆ. ಮುದ್ರಣ ಮಾಧ್ಯಮ, ಪತ್ರಿಕೋದ್ಯಮದ ಪ್ರಾಮುಖ್ಯತೆ ಮತ್ತು ಪತ್ರಕರ್ತರ ಅಮೂಲ್ಯವಾದ ಕೊಡುಗೆಯನ್ನು ಗೌರವಿಸುವ ಮತ್ತು ಸ್ಮರಿಸುವ ಸುದಿನವಾಗಿದೆ, ಡಿಜಿಟಲ್ ಯುಗದಲ್ಲಿ ನಮ್ಮ ಸಾಂಪ್ರದಾಯಿಕ ಪತ್ರಿಕೋದ್ಯಮದ ಕುರಿತು ಓದುಗರಲ್ಲಿ ಉತ್ತೇಜಿಸುವುದು ಮತ್ತು ಅರಿವು ಮೂಡಿಸುವದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ.
ಉದ್ಧೇಶ
ಪತ್ರಿಕೋದ್ಯಮದ ಇತಿಹಾಸ, ಅಭಿವ್ಯಕ್ತಿ ಸ್ವಾತಂತ್ರ್ಯ, ಮುದ್ರಣ ಮಾಧ್ಯಮದ ಮಹತ್ವವನ್ನು ಸಾರಲು ಈ ದಿನದ ಆಚರಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದು ಪತ್ರಿಕೆಗಳು ತಮ್ಮ ಮೌಲ್ವಿಕ ಸುದ್ದಿ ಮತ್ತು ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರುವಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿವೆ. ಅದರ ಜತೆಗೆ ಪತ್ರಕರ್ತರ ಹಕ್ಕುಗಳನ್ನು ರಕ್ಷಿಸುವಲ್ಲಿ ಈ ದಿನದ ಜಾಗೃತಿ ಅಗತ್ಯವಾಗಿದೆ. ಪ್ರತಿಯೊಬ್ಬರ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಾ, ಸಾರ್ವಜನಿಕರಿಗೆ ನಿಖರವಾದ ಮಾಹಿತಿಯನ್ನು ತಲುಪಿಸುವಲ್ಲಿ ಪತ್ರಕರ್ತರ ಅಮೂಲ್ಯವಾದ ಪಾತ್ರವನ್ನು ಗೌರವಿಸುವುದು ಈ ದಿನದ ಆಚರಣೆಯ ಧ್ಯೇಯೋದ್ಧೇಶವಾಗಿದೆ. ರಾಷ್ಟçದಲ್ಲಿ ಮೊಟ್ಟಮೊದಲ ಪತ್ರಿಕೆಯನ್ನು ಆರಂಭಿಸಿದ ಜೇಮ್ಸ್ ಅಗಸ್ಟಸ್ ಹಿಕಿ ಅವರನ್ನು ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಎಂದು ಪರಿಗಣಿಸಲಾಗಿದೆ.

ಪತ್ರಿಕಾ ದಿನದ ಮಹತ್ವ
ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ವಿಚಾರಗಳು ಮತ್ತು ಪ್ರಚಲಿತ ಘಟನೆಗಳು ಇಡೀ ಜಗತ್ತಿನಲ್ಲಿ ನಡೆದು ಹೋದ ಸನ್ನಿವೇಶ, ಘಟನೆ ಮತ್ತು ಸಂದರ್ಭಗಳನ್ನು ತಿಳಿಸಿಕೊಡುತ್ತವೆ. ಅದರಲ್ಲೂ ವಿಶೇಷವಾಗಿ ಮಕ್ಕಳು ಪತ್ರಿಕೆಗಳನ್ನು ದೈನಂದಿನವಾಗಿ ಓದುವುದರಿಂದ ಓದುವ ಹವ್ಯಾಸ ಮತ್ತು ಸಂವಹನ ಕೌಶಲ್ಯ ವೃದ್ಧಿಸಿ ಗ್ರಹಿಕಾಶಕ್ತಿಯನ್ನು ಸುಧಾರಿಸುತ್ತವೆ. ಎಲ್ಲ ರಂಗಗಳ ಬಗ್ಗೆ ವಿಶೇಷ ಅಂಕಣಗಳ ಮೂಲಕ ವಿಶ್ಲೇಷಣಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸುತ್ತವೆ. ವೃತ್ತಪತ್ರಿಕೆಗಳು ಸಾರ್ವಜನಿಕ ಸಂವಾದವನ್ನು ಏರ್ಪಡಿಸಿ ಜನರಿಗೆ ಹೊಸ ಸಂಗತಿ, ವಿಷಯಗಳು ಮತ್ತು ಚರ್ಚೆಗಳ ಮೇಲೆ ಬೆಳಕು ಚೆಲ್ಲುತ್ತಿವೆ. ಆದ್ದರಿಂದ ಸಮಾಜವನ್ನು ಜಾಗೃತಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಗಣನೀಯ ಕೊಡುಗೆ ನೀಡುತ್ತಿರುವ ವೃತ್ತಪತ್ರಿಕೆ ದಿನದಂದು ಪರ್ತಕರ್ತರ ಕಾರ್ಯವನ್ನು ಗೌರವಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿ, ಯುವಕರು ಮತ್ತು ಓದುಗರಲ್ಲಿ ವೃತ್ತಪತ್ರಿಕೆಯ ಪಾತ್ರ, ಮಹತ್ವ, ಪರ್ತಕರ್ತರ ಸೇವೆಯನ್ನು ಜನರಿಗೆ ಜನರಿಗೆ ತಿಳಿಸುವ ಕಾರ್ಯ ನಡೆಯಬೇಕಾಗಿದೆ. ಅದಕ್ಕಂತಲೇ ಪತ್ರಿಕೆಗಳಿಗೆ ‘ಜ್ಞಾನದ ಕಣಜ’ ಮತ್ತು ‘ಸತ್ಯದ ಪ್ರತಿಬಿಂಬ’ ಎಂತಲೂ ಕರೆಯಬಹುದು.


