“ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮೀಣ ಪ್ರದೇಶಗಳ ಅನೇಕ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ, ಸಮಾಜದ ಸುವ್ಯವಸ್ಥೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವ್ಯಕ್ತಿಗಳಲ್ಲಿ ರಫೀ ಭಂಡಾರಿ ಕೂಡ ಒಬ್ಬರಾಗಿದ್ದಾರೆ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಪತ್ರಕರ್ತ ರಫೀ ಭಂಡಾರಿ ಅಭಿನಂದಾನ ಸಮಿತಿ ವಿಜಯಪುರ ಇವರ ಸಹಯೋಗದಲ್ಲಿ ಆಯೋಜಿಸಿದ್ದ “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ ಮತ್ತು ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ದತ್ತಿನಿ಼ಧಿ ಉಪನ್ಯಾಸ ಸ್ಥಾಪನೆ ಘೋಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಅಪಾರ ಭಾಷಾ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದ್ದು, ವಿವಿಧ ಭಾಷೆಗಳ ಮೂಲಕ ಅನೇಕ ಸಮುದಾಯಗಳು ಹಾಗೂ ಸಮಾಜಗಳ ಬೆಳವಣಿಗೆಯಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಿದೆ. ಆದರೆ, ಗ್ರಾಮೀಣ ಸಮಸ್ಯೆಗಳು ಇನ್ನೂ ಸಮರ್ಪಕವಾಗಿ ಮುಖ್ಯವಾಹಿನಿಗೆ ಬರದೇ ಉಳಿದಿವೆ ಎಂಬುದು ಆತಂಕಕಾರಿ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಪತ್ರಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಪತ್ರಿಕೆಯೂ ಸಮಾಜದ ಸುವ್ಯವಸ್ಥೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡೇ ಕೆಲಸ ಮಾಡುತ್ತಿದೆ. ಈ ಸಾಧನೆಗಳ ಹಿಂದೆ ಅನೇಕ ವ್ಯಕ್ತಿಗಳ ಅಪ್ರತಿಮ ಪರಿಶ್ರಮ ಅಡಗಿದೆ. ಅಂತಹ ರೂವಾರಿಗಳಲ್ಲಿ ಒಬ್ಬರಾದ ರಫೀ ಭಂಡಾರಿ ಅವರು ಅನೇಕ ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇಂತಹ ಮಾದರಿ ನಾಯಕರು ಪತ್ರಿಕೋದ್ಯಮ ಕ್ಷೇತ್ರಕ್ಕೆ ದಾರಿದೀಪವಾಗಿದ್ದು, ಇತರರಿಗೆ ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎ.ಎಂ.ಖಾನ್, ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಪತ್ರಕರ್ತ ರಫೀ ಭಂಡಾರಿ ವ್ಯಕ್ತಿತ್ವ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು. ವಸೀಮ ಭಂಡಾರಿ ಹಾಗೂ ನಾಲ್ಕು ಸಹೋದರರಿಂದ ಪತ್ರಕರ್ತ ರಫೀ ಭಂಡಾರಿ ದತ್ತಿನಿಧಿ ಉಪನ್ಯಾಸ ಸ್ಥಾಪನೆ ಘೋಷಣೆ ಮಾಡಿ ಮತ್ತು ಚಕ್ ಹಸ್ತಾಂತರಿಸಿದರು.
ವೇದಿಕೆ ಮೇಲಿನ ಗಣ್ಯರಿಂದ ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ ಹೈದರಾಬಾದ್ ಇವರಿಂದ ಸ್ಮರಣಿಕೆ ಸಮರ್ಪಣೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಬೆಂಗಳೂರಿನ ಡೈಲಿ ಸಾಲಾರ್ ದಿನಪತ್ರಿಕೆಯ ಸಂಪಾದಕ ಅಸ್ಜದ್ ನವಾಜ್, ಬೆಂಗಳೂರಿನ ರಾಷ್ಟ್ರೀಯ ಸಹಾರಾ ದಿನಪತ್ರಿಕೆಯ ಸಂಪಾದಕ ಎನ್.ಹಮೀದಿ, ಬಿಎಲ್‌ಡಿಇ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ, ವಿಜಯಪುರದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಹಿರಿಯ ಪತ್ರಕರ್ತ ಗೋಪಾಲ ನಾಯಕ್, ಆಲ್ ಅಮೀನ್ ಚಾರಿಟೇಬಲ್ ಫಂಡ್ ಟ್ರಸ್ಟ್ನ ಟ್ರಸ್ಟಿ ರಿಯಾಜ್ ಫಾರೂಕಿ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸಲಾವುದ್ದೀನ್ ಪುಣೇಕರ್ ಹಾಗೂ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ್, ನಜೀಬ್ ಭಕ್ಷಿ, ವಸೀಮ್ ಭಂಡಾರಿ ಮತ್ತು ಕಲೀಮ ನಾಯಕ, ಜಿಲ್ಲೆಯ ಎಲ್ಲ ಪತ್ರಕರ್ತರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಾಫೀಸ್ ವಕೀಲ್ ಅಹ್ಮದ್ ಸಾಬ್ ಕುರಾನ್ ಪಠಣ ಮಾಡಿದರು. ಹಿರಿಯ ಪತ್ರಕರ್ತ ಬಾಬುರಾವ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಎಸ್.ಎಂ.ಪಾಟೀಲ್ ಗಣಿಹಾರ ಸ್ವಾಗತಿಸಿದರು. ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಪ್ರಾಸ್ತವಿಕವಾಗಿ ಮಾತನಾಡಿದರು.
ಮೌಲಾನಾ ಆಜಾದ್ ಉರ್ದು ವಿಶ್ವವಿದ್ಯಾಲಯದ ಪ್ರೊ.ಮುಸ್ತಾಕ್ ಪಟೇಲ್ ಅಭಿನಂದನಾ ನುಡಿಗಳನ್ನಾಡಿದರು. ಉಪಾಧ್ಯಕ್ಷ ಅಶೋಕ ಯೆಡಹಳ್ಳಿ ವಂದಿಸಿದರು. ಹುಬ್ಬಳಿಯ ಡೆಕ್ಕನ್ ಹೆರಾಲ್ಡ್ ಹಿರಿಯ ಉಪಸಂಪಾದಕಿ ಶಾಹಿನ್ ಮೊಕಾಶಿ ನಿರೂಪಿಸಿದರು.
“ಅಚ್ಚು ಮೊಳೆಗಳಿಂದ ಆರಂಭಿಸಿದ ನನ್ನ ಪಯಣ ಇಂದು ನನನ್ನು ಇಲ್ಲಿ ತನಕ ತಂದು ನಿಲ್ಲಿಸಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಸನ್ಮಾನವು ನನಗೆ ಇನ್ನಷ್ಟು ಉತ್ಸಾಹ ಮತ್ತು ಪ್ರೇರಣೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿ, ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡುವೆನು.”
– ರಫೀ ಭಂಡಾರಿ
ಹಿರಿಯ ಪತ್ರಕರ್ತರು, ವಿಜಯಪುರ

