ಚಡಚಣದಲ್ಲಿ ವಿವಿಧ ಇಲಾಖೆಗಳ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಭರವಸೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರ ಜಿಲ್ಲಾಧಿಕಾರಿ ಡಾ| ಆನಂದ.ಕೆ. ಅವರು ಬುಧವಾರ ಚಡಚಣ ಪಟ್ಟಣಕ್ಕೆ ಭೇಟಿ ನೀಡಿ ಸಮುದಾಯ ಆರೋಗ್ಯ ಕೇಂದ್ರ, ಬಿಸಿಎಮ್ ವಸತಿಗೃಹ, ಅಂಗನವಾಡಿ ಕೇಂದ್ರ, ಭೂಮಿ ಕೇಂದ್ರ, ತಹಶೀಲದಾರರ ಕಾರ್ಯಾಲಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳನ್ನು ಪರಿಶೀಲಿಸಿದರು.
ಪರಿಶೀಲನೆಯ ವೇಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೇವೆಗಳ ಸ್ಥಿತಿ, ಸಿಬ್ಬಂದಿ ಹಾಜರಾತಿ, ಔಷಧಿ ಲಭ್ಯತೆ, ಸ್ವಚ್ಛತೆ ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸಮಯಬದ್ಧ ಸೇವೆ ನೀಡುವಂತೆ ಹಾಗೂ ಔಷಧಿಗಳನ್ನು ಹೊರಗಡೆಯಿಂದ ಬರೆದುಕೊಡಬಾರದು, ಡಯಾಲಿಸಿಸ್ ವಿಭಾಗದಲ್ಲಿ ಕೇವಲ 2 ಹಾಸಿಗಳು ಇದ್ದು, ಹೆಚ್ಚುವರಿ ಹಾಸಿಗೆಗಳ ಬೇಡಿಕೆ ಇಟ್ಟಿದ್ದು, ನಾನು ಸರಕಾರದ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಹೇಳಿದ ಅವರು, ಈ ಆಸ್ಪತ್ರೆಯನ್ನು ತಾಲೂಕಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಪತ್ರಕರ್ತರು ಕೇಳಿದಾಗ ತಾಲೂಕಾ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಬೇಕಾದರೆ ವೈದ್ಯರ ಕೊರತೆ ಇದೆ. ಅದೂ ಅಲ್ಲದೇ ಪಿಡಿಯಾಸ್ಟ್ರಿಶನ್ ಕೂಡ ಬೇಕಾಗುತ್ತದೆ ಸಧ್ಯ ಇಲ್ಲಿ ಪಿಡಿಯಾಸ್ಟ್ರಿಶನ್ ಮಂಜೂರು ಮಾಡಿದರೆ ನಾನು ಸರಕಾರದ ಹಂತದಲ್ಲಿ ತಾಲೂಕಾ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು.
ಅಂಗನವಾಡಿ ನಂ.9 ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ಮಕ್ಕಳ ಪೌಷ್ಟಿಕ ಆಹಾರ ವಿತರಣೆ, ಹಾಜರಾತಿ, ದಾಖಲೆಗಳ ನಿರ್ವಹಣೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು.
ಭೂಮಿ ಕೇಂದ್ರ ಹಾಗೂ ತಹಶೀಲದಾರರ ಕಾರ್ಯಾಲಯದಲ್ಲಿ ಸಾರ್ವಜನಿಕ ಸೇವೆಗಳ ಪ್ರಗತಿ, ಅರ್ಜಿ ವಿಲೇವಾರಿ ಸ್ಥಿತಿ ಹಾಗೂ ನಾಗರಿಕರಿಗೆ ಉಂಟಾಗುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ವಿಳಂಬವಿಲ್ಲದೆ ಸೇವೆ ಒದಗಿಸುವಂತೆ ನಿರ್ದೇಶನ ನೀಡಿದರು.
ನಂತರ ಪಟ್ಟಣದ ನಿವರಗಿ ಕ್ರಾಸ್ ಬಳಿ ಮಿನಿ ವಿಧಾನಸೌದಕ್ಕೆ ನೀಡಲಾದ ಸ್ಥಳವನ್ನು ಪರಿಶೀಲನೆ ಮಾಡಿ, ಕಟ್ಟಡ ನಿರ್ಮಾಣದ ಕುರಿತು ತಹಶಿಲದಾರ ಸಂಜಯ ಇಂಗಳೆ ಅವರಿಂದ ಮಾಹಿತಿ ಪಡೆದರು.
ಸ್ಥಳದಲ್ಲಿಯೇ ಇದ್ದ ಉಪವಿಭಾಗಾಧಿಕಾರಿಗೆ ಮಿನಿ ವಿಧಾನಸೌಧ ಕಟ್ಟಡಕ್ಕೆ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲದಾರ ಸಂಜಯ ಇಂಗಳೆ, ತಾ.ಪಂ. ಇಓ ಸಂಜಯ ಖಡಗೇಕರ, ಅಪರಾಧ ವಿಭಾಗ ಪಿಎಸ್ಐ ಎನ್.ಜಿ. ಅಪನಾಯ್ಕರ, ಪ.ಪಂ. ಮುಖ್ಯಾಧಿಕಾರಿ ಬಿ.ಕೆ. ತಾವಸೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

