ದಿ. ಎಂ.ಸಿ.ಮನಗೂಳಿ ಅವರ ೫ನೇ ಪುಣ್ಯಸ್ಮರಣೆ ನಿಮಿತ್ತ ಹೊನಲು ಬೆಳಕಿನ ವಾಲಿಬಾಲ್ “ಭಗೀರಥ ಕಪ್” ಕಾರ್ಯಕ್ರಮಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದಿ. ಎಂ.ಸಿ.ಮನಗೂಳಿ ಅವರು ಕಡು ಬಡುತನದಲ್ಲಿ ಹುಟ್ಟಿದರು ಜನಸೇವೆ ಮಾಡಬೇಕೆಂಬ ಬಯಕೆ ಅವರಲ್ಲಿ ಬಹಳಷ್ಟಿತ್ತು. ಅದರ ಫಲವಾಗಿ ಅವರು ಸಚಿವರಾಗಿ ಆಯ್ಕೆಯಾಗಿ ಜಿಲ್ಲೆಗೆ ಅನೇಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಒಬ್ಬ ದೀಮಂತ ವ್ಯಕ್ತಿಯಾಗಿದ್ದರು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಸಿಂದಗಿ ಪಟ್ಟಣದ ಎಚ್.ಜಿ.ಕಾಲೇಜಿನ ಮೈದಾನದಲ್ಲಿ ಕರ್ನಾಟಕ ವಾಲಿಬಾಲ್ ಸಂಸ್ಥೆ ಹಾಗೂ ಎಂ.ಸಿ.ಮನಗೂಳಿ ಪ್ರತಿಷ್ಠಾನದ ವತಿಯಿಂದ ಎಂ.ಸಿ.ಮನಗೂಳಿ ಅವರ ೫ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡ ಹೊನಲು ಬೆಳಕಿನ ವಾಲಿಬಾಲ್ ಭಗೀರಥ ಕಪ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯರ ಮಾರ್ಗದರ್ಶನ ಮುಖೇನ ನಾವೆಲ್ಲ ಕಾರ್ಯನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ದಿ.ಎಂ.ಸಿ.ಮನಗೂಳಿ ಅವರ ಸುಪುತ್ರ ಶಾಸಕ ಅಶೋಕ ಮನಗೂಳಿ ಅವರೇ ನೀದರ್ಶನ. ಅಶೋಕ ಮನಗೂಳಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ತಂದೆಗೆ ತಕ್ಕ ಮಗ ಎಂದೆನಿಸಿಕೊಳ್ಳುತ್ತಿದ್ದಾರೆ. ಅವರ ಕಾರ್ಯ ಹೀಗೆ ಸಾಗಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ವಾಲಿಬಾಲ್ ಸಂಸ್ಥೆಯ ಪ್ರ.ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮಾತನಾಡಿ, ಸಿಂದಗಿ ಶಾಸಕ ಮನಗೂಳಿ ಅವರು ಒಬ್ಬ ಕ್ರೀಡಾಭಿಮಾನಿ ಎನ್ನುವುದಕ್ಕೆ ಈ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯೇ ಉದಾಹರಣೆ. ಮುಂಬರುವ ದಿನಮಾನಗಳಲ್ಲಿ ಯಾವುದೇ ಪಂದ್ಯಾವಳಿ ಹಮ್ಮಿಕೊಂಡರು ನಮ್ಮ ಸಂಸ್ಥೆಯ ಸಹಕಾರ ಸದಾ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ ಮನಗೂಳಿ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ ವಾಲಿಬಾಲ್ ಮೈದಾನದ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಅಶೋಕ ವಾರದ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ರಾಂಪೂರ ಪಿಎ ಗ್ರಾಮದ ಆರೂಢಮಠದ ನಿತ್ಯಾನಂದ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿದ ಬಾಳು ಬೆಳಗುಂದಿ, ಬಾಲಾಜಿ ಪ್ರಭು, ರವಿಕುಮಾರ, ನಾಗೇಶ್ವರಾವ್, ಛಲಪತಿ, ಮಂಜುನಾಥ, ನಿವೃತ್ತ ದೈಹಿಕ ಉಪನ್ಯಾಸಕ ಕೆ.ಎಚ್.ಸೋಮಾಪುರ, ಎಚ್.ಎಂ.ಉತ್ನಾಳ, ಶಿವಪ್ಪಗೌಡ ಬಿರಾದಾರ, ಅಶೋಕ ವಾರದ, ಡಾ.ರವಿ ಗೋಲಾ, ಡಾ.ಅರವಿಂದ ಮನಗೂಳಿ, ಉಮೇಶ ಜೋಗುರ, ಪಂಡಿತ ಕುಲಕರ್ಣಿ, ಗುರಣ್ಣಗೌಡ ಪಾಟೀಲ, ಎಂ.ಎ.ಖತೀಬ, ಅಶೋಕ ಕೊಳಾರಿ, ಸೋಮನಗೌಡ ಬಿರಾದಾರ, ಕಲ್ಲಪ್ಪ ನಾಯ್ಕೋಡಿ, ಸಿದ್ದರಾಮ ಕಲ್ಲೂರ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಕ್ರೀಡಾಭಿಮಾನಿಗಳು ಹಾಗೂ ಮನಗೂಳಿ ಅವರ ಅಭಿಮಾನಿಗಳು ಇದ್ದರು.
ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಸಿದ್ದಲಿಂದ ಕಿಣಗಿ ನಿರೂಪಿಸಿ, ವಂದಿಸಿದರು.
ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದ ೬ ತಂಡಗಳಾದ ಕರ್ನಾಟಕ ರಾಜ್ಯ ಪೊಲೀಸ್, ಬೆಂಗಳೂರಿನ ಎ.ಎಸ್.ಸಿ ಕರ್ನಾಟಕ ಪೋಸ್ಟಲ್, ಸ್ಪೋರ್ಟ್ ಹಾಸ್ಟೆಲ್, ಎಸ್‌ಡಿಎಂ ಉಜಿರೆ, ಹುಬ್ಬಳ್ಳಿಯ ಸೌತ್ ಸೆಂಟ್ರಲ್ ರೈಲ್ವೆ ಭಾಗವಹಿಸಿವೆ.
” ಮನಗೂಳಿ ಅವರನ್ನು ಸ್ಮರಣೆ ಮಾಡಿಕೊಳ್ಳುವ ಒಂದು ಅವರೂಪದ ಕಾರ್ಯಕ್ರಮವಿದು. ಸಮನಾಗಿ ನೋಡುವ ಭಾವ ಯಾರಲ್ಲಿರುತ್ತದೆಯೋ ಅವರು ಜೀವನದಲ್ಲಿ ಸಾಧನೆ ಮಾಡುತ್ತಾರೆ. ಮನಗೂಳಿ ಅವರು ಈ ನಾಡು ಕಂಡಂತಹ ಒಬ್ಬ ಶ್ರೇಷ್ಠ ರಾಜಕಾರಣಿ ಮತ್ತು ಸಮಾಜ ಚಿಂತಕ.”
– ಡಾ.ಪ್ರಭುಸಾರಂಗದೇವ ಶಿವಾಚಾರ್ಯರು
ಸಾರಂಗಮಠ-ಗಚ್ಚಿನಮಠ ಸಿಂದಗಿ

