ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಶಾಲೆ ಮಕ್ಕಳ ಸಾಂಸ್ಕೃತಿಕ ಕಲಾ ಪ್ರದರ್ಶನದಲ್ಲಿ ಪಟ್ಟಣದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಪ್ರಸ್ತುತ ಪಡಿಸಿದ ಕಿತ್ತೂರು ಸಂಸ್ಥಾನದ ವೀರ ರಾಣಿ ಚೆನ್ನಮ್ಮಳ ಬಲಗೈ ಭಂಟ ಸಂಗೊಳ್ಳಿ ರಾಯಣ್ಣನ ಪ್ರಮುಖ ಪಾತ್ರದ ರೂಪಕ ನಾಟಕ ನೋಡುಗರ ಮೆಚ್ಚುಗೆ ಪಾತ್ರವಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ಅವರ ಸಾವಿನವರೆಗೂ ಹೋರಾಡಿದ್ದು, ಥ್ಯಾಖರೆ, ರಾಣಿ ಚನ್ನಮ್ಮ ಮತ್ತು ರಾಯಣ್ಣನ ತಾಯಿ ಕೆಂಚವ್ವಳೊಂದಿಗಿನ ಸಂಭಾಷಣೆಗಳ ಮಕ್ಕಳ ಅಭಿನಯದ ಕಿರು ನಾಟಕ ಸೇರಿದ ಸಭಿಕರನ್ನು ಭಾವದ್ವೇಗಗೊಳಿಸಿತು. ದೇಶಭಕ್ತಿಯ ರಾಯಣ್ಣ ಕಚ್ಚೆದೆಯ ಮಾತುಗಳಿಗೆ ಬಂದ ಹರ್ಷೋದ್ಘಾರ, ಶಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿತು.
ಕೆಚ್ಚೆದೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಭಕ್ತಿಯ ಮಕ್ಕಳ ಮನೋಜ್ಞ ಪ್ರದರ್ಶನ ಪುರಸಭೆಯಿಂದ ಪ್ರಥಮ ಬಹುಮಾನ ಪಡೆದುಕೊಂಡು, ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸೇರಿದಂತೆ ಹಲವರು ಅಭಿನಂದಿಸಿ ಶ್ಲಾಘಿಸಿದರು.

