ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಈ ಭಾಗದ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಈಗಾಗಲೇ ಯುಕೆಪಿ ಹಂತ-೧ ಮತ್ತು ಹಂತ-೨ ನ್ನು ಯಶಸ್ವಿಯಾಗಿ ನಿರ್ವಹಿಸಿ ೬ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸಲಾಗಿದೆ, ಈಗ ಹಂತ-೩ ರ ಕಾಮಗಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಸವಾಲು ನಮ್ಮ ಮುಂದಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ ಅಭಿಪ್ರಾಯಪಟ್ಟರು.
ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಜರುಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬಹುದಿನಗಳ ಬೇಡಿಕೆಯಾಗಿರುವ ಆಲಮಟ್ಟಿಯ ಎಚ್ಪಿಎಸ್ ಶಾಲೆಯ ಮೈದಾನವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ವಿಶ್ವದ ಅತಿ ದೊಡ್ಡ ಸಂವಿಧಾನ ಹೊಂದಿದ ಭಾರತದಲ್ಲಿ ಪ್ರತಿ ಪ್ರಜೆಗೂ ಸಮಾನ ಹಕ್ಕು ಮತ್ತು ಘನತೆಯನ್ನು ನೀಡಿದೆ. ಸಂವಿಧಾನದ ಆಶಯಗಳನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರತಿ ವಿದ್ಯಾರ್ಥಿಯನ್ನು ಎಲ್ಲಾ ದೃಷ್ಠಿಯಿಂದಲೂ ಸಮಾನತೆಯಿಂದ ಕಂಡು, ಆತನ ಪ್ರತಿಭೆಗೆ ಪ್ರೋತ್ಸಾಹಿಸಬೇಕು, ಇದು ಶಿಕ್ಷಕರ ಕರ್ತವ್ಯ ಎಂದವರು ಅಭಿಪ್ರಾಯಪಟ್ಟರು.
ನೌಕರರ ಸಂಘದ ಅಧ್ಯಕ್ಷ ಬಸವರಾಜ ದಳವಾಯಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಎಂಜಿನಿಯರ್ ಡಿ.ಬಸವರಾಜ, ನಿಗಮದ ಹಿರಿಯ ಅಧಿಕಾರಿಗಳಾದ ಕೆ.ಎಸ್. ಅಭಿಮನ್ಯು, ಗೋವಿಂದ ರಾಠೋಡ, ತಾರಾಸಿಂಗ್ ದೊಡಮನಿ, ಐ.ಎಲ್. ಕಳಸಾ, ಅಮರೇಗೌಡ, ಎನ್.ಕೆ.ಬಾಗಾಯತ್, ರವಿ ಚಂದ್ರಗಿರಿಯವರ, ಕೆ.ಜಯಣ್ಣ, ಅಬೂಬಕರ ಬಾಗವಾನ, ಎಂ.ಆರ್. ಬಾಗವಾನ, ಮಹೇಶ ಪಾಟೀಲ, ಸಹಾಯಕ ಕಮಾಂಡೆಂಟ್ ಈರಪ್ಪ ವಾಲಿ, ಇನ್ಸಪೆಕ್ಟರ್ ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ನಿಸ್ಸಾರ ಪಿಂಜಾರ್, ಸುರೇಶ ಹುರಕಡ್ಲಿ, ಪ್ರಾಂಶುಪಾಲರಾದ ಅಂಜಲಿ ಎ.ಎಸ್, ಪಿ.ಎ. ಹೇಮಗಿರಿಮಠ, ಜಿ.ಎಂ. ಕೋಟ್ಯಾಳ, ಎಸ್.ಐ. ಗಿಡ್ಡಪ್ಪಗೋಳ, ಬಿ.ಎಸ್. ಯರವಿನತೆಲಿಮಠ, ರಜಿಯಾ ಅತ್ತಾರ, ಕೆ.ಎನ್. ಹಿರೇಮಠ, ಮಹೇಶ ಗಾಳಪ್ಪಗೋಳ, ವೈ.ಎಂ. ಪಾತ್ರೋಟ, ಬಿ.ಜಿ. ಬನ್ನೂರ ಮತ್ತೀತರರು ಇದ್ದರು.
೧೦ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ, ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳು ಗಮನಸೆಳೆದವು.

