ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪಮುತ್ಯಾನ ಜಾತ್ರೆಯಂಗವಾಗಿ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಶುಕ್ರವಾರ-ಶನಿವಾರ ಜಾತ್ರೆಯಲ್ಲಿ ಕಂಡುಬಂದವು. ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದು ಕಂಡುಬಂದಿತ್ತು.
ಈ ಸಲದ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳು ರೂ.1.50 ಲಕ್ಷದಿಂದ 2 ಲಕ್ಷದವರೆಗೂ ಮಾರಾಟವಾದವು. ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳು ಸಹ ಮಾರಾಟಕ್ಕೆ ಬಂದಿದ್ದವು. ರೈತ ಬಾಂಧವರು ತಮಗೆ ಬೇಕಾದ ಜಾನುವಾರುಗಳನ್ನು ಖರೀದಿ ಮಾಡುವ ಜೊತೆಗೆ ಜಾನುವಾರುಗಳಿಗೆ ಬೇಕಾದ ಹಗ್ಗ, ಗೆಜ್ಜೆ ಸರ, ಹಣೆಕಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.
ಶುಕ್ರವಾರದಿಂದ ಆರಂಭವಾಗಿರುವ ಜಾನುವಾರುಗಳ ಜಾತ್ರೆಗೆ ಜಿಲ್ಲೆ ಸೇರಿದಂತೆ ಶಹಾಪೂರ, ಯಾದಗಿರಿ, ಬಾಗಲಕೋಟ, ರಾಯಚೂರ ವಿವಿಧ ಜಿಲ್ಲೆಯ ರೈತ ಬಾಂಧವರು ಮಾರಾಟ ಮಾಡುವ ಉದ್ದೇಶದಿಂದ ಅವುಗಳಿಗೆ ಅಗತ್ಯವಿರುವ ಮೇವಿನೊಂದಿಗೆ ಬಂದು ಬಿಡು ಬಿಟ್ಟಿದ್ದಾರೆ. ಬಿರು ಬಿಸಿಲಿನಿಂದಾಗಿ ಬಸವಳಿಯುತ್ತಿರುವ ಎತ್ತುಗಳಿಗೆ ಕೆಲ ರೈತರು ನೆರಳು ಮಾಡಿರುವುದು ಕಂಡುಬಂದಿತ್ತು.
ತಾಲೂಕಿನ ಇಂಗಳೇಶ್ವರ ಗ್ರಾಮದ ಹಣಮಂತ ಗುಬ್ಬಾ ಅವರು ಜಾನುವಾರು ಜಾತ್ರೆಯಲ್ಲಿ ಎತ್ತುಗಳಿಗೆ, ಆಕಳುಗಳಿಗೆ ಬಾರಿ ಡಿಮಾಂಡ್ ಇದೆ. ಉತ್ತಮ ರಾಸುಗಳು ಎರಡು ಲಕ್ಷದವರೆಗೂ ಮಾರಾಟವಾಗಿವೆ ಎಂದು ಹೇಳಿದರು.
ಈ ಜಾತ್ರೆಯಲ್ಲಿ ಅಥಣಿ, ಗೋಟೆ,ಬೆನಕದಿನ್ನಿಯಿಂದ ಎತ್ತಿನ ಗಾಡಿಗಳು ಮಾರಾಟಕ್ಕೆ ಬಂದಿವೆ. ಎರಢೂವರೆ ಪೂಟ್ನಿಂದ ಹಿಡಿದು ಆರು-ಏಳು ಪೂಟ್ದವರೆಗೂ ಇರುವ ಎತ್ತಿನ ಗಾಡಿಗಳು ಕಂಡುಬಂದವು. ರೈತರು ಚೌಕಾಸಿ ಮಾಡಿ ಎತ್ತಿನ ಗಾಡಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಎರಡೂವರೆ ಪೂಟಿನ 12 ಸಾವಿರ, ನಾಲ್ಕು ಪೂಟ್ ಗಾಡಿಗೆ 16 ಸಾವಿರ, ಮೂರುವರೆ ಪೂಟಿನ ಗಾಡಿಗೆ 14 ಸಾವಿರ, ಐದು ಪೂಟಿನ ಗಾಡಿಗೆ 22 ಸಾವಿರ, ಆರು ಪೂಟಿನ ಗಾಡಿಗೆ 24 ಸಾವಿರ, ಏಳು ಪೂಟಿನ ಗಾಡಿಗೆ 28-30 ಸಾವಿರ ಬೆಲೆ ಇದೆ.
ಎತ್ತಿನ ಗಾಡಿ ಮಾರಾಟಗಾರ ಜಮಖಂಡಿ ತಾಲೂಕಿನ ಗೋಟೆಯ ಮಹಾಂತೇಶ ಭಜಂತ್ರಿ ಅವರನ್ನು ಮಾತನಾಡಿಸಿದಾಗ ನಾನು ಎರಢೂವರೆ ಪೂಟ್ದಿಂದ ಹಿಡಿದು ಏಳು ಪೂಟ್ದವರೆಗೂ ಇರುವ ಎತ್ತಿನ ಗಾಡಿಗಳನ್ನು ಮಾರಾಟಕ್ಕೆ ತಂದಿದ್ದೇನೆ. 52 ಗಾಡಿ ತರಲಾಗಿದೆ. ಸ್ವಲ್ಪ ಮಟ್ಟಿಗೆ ಗಾಡಿಗಳು ಮಾರಾಟವಾಗಿವೆ. ನಿನ್ನೆ 12 ಮಾರಾಟವಾಗಿವೆ. ಇಂದು 7-8 ಗಾಡಿ ಮಾರಾಟವಾಗಿವೆ. ನಾಳೆ ಒಂದು ದಿನ ಇದ್ದು ಎಷ್ಟು ಮಾರಾಟವಾಗುತ್ತವೋ ಅಷ್ಟು ಮಾರಾಟ ಮಾಡುವುದಾಗಿ ಹೇಳಿದ ಅವರು, ಈ ಜಾತ್ರೆಯಲ್ಲಿ ಜಾತ್ರಾ ಸಮಿತಿಯಿಂದ ನಮಗೆ ಎಲ್ಲ ರೀತಿಯ ವ್ಯವಸ್ಥೆಯ ಮಾಡಲಾಗಿದೆ ಎಂದರು.
ಜಾತ್ರಾ ಉತ್ಸವ ಸಮಿತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಜೊತೆಗೆ ರೈತರು ಇರುವೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡುತ್ತಿರುವುದು ಕಂಡುಬಂದಿತ್ತು. ಜನರು ವಿವಿಧ ಮನರಂಜನಾ ಆಟಿಕೆಗಳಲ್ಲಿ ಕುಳಿತು ಸಂಭ್ರಮ ಪಡುತ್ತಿರುವದು ಕಂಡುಬಂದಿತ್ತು.
ಪ್ರತಿ ವರ್ಷ ಉಗಾದಿ ಹಬ್ಬದಂದು ನಡೆಯುವ ಸುಕ್ಷೇತ್ರ ಜಾಯವಾಡಗಿಯ ಶಿವಪ್ಪ ಮುತ್ಯಾ , ಸೋಮನಾಥ ಮುತ್ಯಾ ಜಾತ್ರಾಮಹೋತ್ಸವದಲ್ಲಿ ವಿಶೇಷವಾಗಿ ಜಾನುವಾರು ಜಾತ್ರೆ ನಡೆಯುತ್ತದೆ.ಇದು ರೈತ ಬಾಂಧವರಿಗೆ ತುಂಬಾ ಅನುಕೂಲವಾಗಿದೆ. ಜಾನುವಾರುಗಳಿಗೆ ಏನಾದರೂ ರೋಗ ಬಂದರೆ ಈ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಹಾಕಿಸಿದರೆ ಜಾನುವಾರುಗಳ ರೋಗ ಗುಣಮುಖವಾಗುವದು ಎಂಬ ನಂಬಿಕೆ ರೈತರಲ್ಲಿದೆ.

