ಉದಯರಶ್ಮಿ ದಿನಪತ್ರಿಕೆ
ಚಡಚಣ: ಹೊಸ ಉಮರಾಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುಜರಾತದ ತಾಪಿದಾಸ ವಜ್ರದಾಸ ತುಲಸಿದಾಸ ಚಾರಿಟೇಬಲ್ ಟ್ರಸ್ಟ್ ನ ಮುಂಬೈ ಶಾಖೆಯ ವತಿಯಿಂದ ಸುಮಾರು 1.80 ಸಾವಿರ ರೂಪಾಯಿ ಮೌಲ್ಯದ ಪ್ರೊಜೆಕ್ಟರ್ ಹಾಗೂ ಸ್ಮಾರ್ಟ್ ಬೋರ್ಡ್ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಟ್ರಸ್ಟ್ ನ ಕೋ ಆರ್ಡಿನೇಟರ್ ವಿ.ಎಂ. ಸಿಂಧಗಿ ಮಾತನಾಡಿ, ಟ್ರಸ್ಟ್ ನಡೆಸುತ್ತಿರುವ ಸಮಾಜಮುಖಿ ಕೆಲಸಗಳಲ್ಲಿ ಒಂದಾದ ದಾನ ಚಟುವಟಿಕೆಗಳ ಕುರಿತು ವಿವರಿಸಿದರು.
ಉಚಿತ ಪುಸ್ತಕ ವಿತರಣೆ, ಸೌಂಡ್ ಸಿಸ್ಟಮ್, ಶಾಲಾ ಫರ್ನಿಚರ್ ಹಾಗೂ ಡಿಜಿಟಲ್ ಸ್ಮಾರ್ಟ್ ಬೋರ್ಡ್ ವಿತರಣೆಗಳ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಟ್ರಸ್ಟ್ ನೀಡುತ್ತಿರುವ ಕೊಡುಗೆಗಳ ಬಗ್ಗೆ ಸವಿವರವಾಗಿ ವಿವರಿಸಿದ ಅವರು,“ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕನು ತನ್ನಲ್ಲಿರುವ ಪ್ರಮಾಣಿಕತೆ, ವಿಶ್ವಾಸ ಮತ್ತು ಮೌಲ್ಯಗಳನ್ನು ಬಲಪಡಿಸಬೇಕು. ಸಮಾಜಕ್ಕೆ ಬೇಕಾದ ಸ್ಥಳಗಳಲ್ಲಿ ಸಾಧ್ಯವಾದ ಮಟ್ಟಿಗೆ ದಾನ ಮಾಡುವುದೇ ನಿಜವಾದ ಸೇವೆ,” ಎಂದು ಹೇಳಿದರು.
ರೈತ ಸಂಘ ಚಡಚಣ ತಾಲೂಕಾಧ್ಯಕ್ಷ ವಸಂತ ಭೈರಾಮಡಿ ಮಾತನಾಡಿ, ಗುಜರಾತದ ತಾಪಿದಾಸ ವಜ್ರದಾಸ ತುಲಸಿದಾಸ ಚಾರಿಟೇಬಲ್ ಟ್ರಸ್ಟ್ನವರು ಶಾಲಾ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಯಿಸಿ, ಶಾಲೆಗೆ ನೀಡಿರುವ ಸ್ಮಾರ್ಟ ಬೋರ್ಡದಿಂದಾಗಿ ನಮ್ಮ ಮಕ್ಕಳ ಕಲಿಕೆ ಗುಣಮಟ್ಟ ಹೆಚ್ಚುವುದು ಖಚಿತ. ಇದು ಶಾಲೆಗೆ ದೊರಕಿದ ಅಮೂಲ್ಯ ದಾನ,” ಎಂದು ಹೇಳಿದ ಅವರು, ಮಕ್ಕಳ ಕಲಿಕೆಗೆ ಅನುಕೂಲವಾಗಲಿದ್ದು, ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಟ್ರಸ್ಟ್ನ ಕಾರ್ಯಗಳನ್ನು ಶ್ಲಾಘಿಸಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಮುಖ್ಯಗುರು ಎ.ಬಿ. ವಡ್ಡರ, ಎಸ್.ಬಿ. ಮಡಸನಾಳ, ಪ್ರಗತಿಪರ ರೈತ ಜಗದೇವಸಾಹುಕಾರ ಭೈರಗೊಂಡ, ಸಿ.ಆರ್.ಪಿ. ಭೀಮಾಶಂಕರ ವಾಘಮೊರೆ, ಟಾಕಳಿ ಶಾಲೆ ಮುಖ್ಯಗುರು ಎಸ್ .ಬಿ. ಪಾಟಿಲ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಜಲಾಲಬುಕಾರಿ ಬಿರಾದಾರ, ಯುವ ಮುಖಂಡ ಅಶೋಕ ಭೈರಗೊಂಡ ಗ್ರಾಮದ ಹಲವಾರು ಗಣ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇದ್ದರು.

